ಭಾರತ ಮೂಲದ ಅಧಿಕಾರಿಯ ನೇಮಕಕ್ಕೆ ಟ್ವಿಟರ್ ಗೆ ಕೊನೆಯ ಅವಕಾಶ ನೀಡಿದ ಕೇಂದ್ರ ಸರಕಾರ

ಹೊಸದಿಲ್ಲಿ: ಸೋಶಿಯಲ್ ಮೀಡಿಯಾ ಕಂಪೆನಿಗಳಿಗೆ ವಿಧಿಸಲಾಗಿರುವ ದೇಶದ ಹೊಸ ಮಾಹಿತಿ ತಂತ್ರಜ್ಞಾನ ನಿಯಮ-2021 ಅನ್ನು ಅನುಸರಿಸಿ ಭಾರತ ಮೂಲದ ಅಧಿಕಾರಿಗಳನ್ನು ನೇಮಕ ಮಾಡಲು ಟ್ವಿಟರ್‌ಗೆ ಅಂತಿಮ ಅವಕಾಶ ನೀಡಲಾಗಿದೆ. ಅದು ವಿಫಲವಾದರೆ ಅದರ 'ಪರಿಣಾಮಗಳನ್ನು' ಎದುರಿಸಲಿದೆ ಎಂದು ಸರಕಾರ ಶನಿವಾರ ಎಚ್ಚರಿಕೆ ನೀಡಿದೆ.
ನಿಯಮಗಳನ್ನು ಅನುಸರಿಸಲು ಟ್ವಿಟರ್ ಇಂಕ್ ಗೆ ಕೊನೆಯ ನೋಟಿಸ್ ನೀಡಲಾಗಿದೆ. ನಿಯಮ ಪಾಲಿಸಲು ವಿಫಲವಾದರೆ ಐಟಿ ಕಾಯ್ದೆ, 2000 ರ ಸೆಕ್ಷನ್ 79 ರ ಅಡಿಯಲ್ಲಿ ಲಭ್ಯವಿರುವ ಹೊಣೆಗಾರಿಕೆಯಿಂದ ವಿನಾಯಿತಿ ಹಿಂತೆಗೆದುಕೊಳ್ಳಲಾಗುತ್ತದೆ . ಐಟಿ ಕಾಯ್ದೆ ಹಾಗೂ ಭಾರತದ ಇತರ ಕಾನೂನು ಪ್ರಕಾರ ಎಲ್ಲ ಪರಿಣಾಮಗಳಿಗೆ ಟ್ವಿಟರ್ ಜವಾಬ್ದಾರಿಯಾಗಿರುತ್ತದೆ ಎಂದು ಸರಕಾರ ತಿಳಿಸಿದೆ.
ಫೇಸ್ ಬುಕ್, ಟ್ವಿಟರ್ ಹಾಗೂ ಇತರ ಸಾಮಾಜಿಕ ಮಾಧ್ಯಮ ಕಂಪೆನಿಗಳು ಮುಖ್ಯ ಪಾಲನಾ ಅಧಿಕಾರಿ, ನೋಡಲ್ ಸಂಪರ್ಕ ಅಧಿಕಾರಿಗಳನ್ನು ಹೊಂದಿರಬೇಕು. ಈ ಎಲ್ಲ ಅಧಿಕಾರಿಗಳು ಭಾರತದ ನಿವಾಸಿಗಳೇ ಆಗಿರಬೇಕು. ಕಾಯ್ದೆಗಳು ಹಾಗೂ ನಿಯಮಗಳ ಪಾಲನೆಯನ್ನು ಖಾತರಿಪಡಿಸುವ ಜವಾಬ್ದಾರಿ ಮುಖ್ಯ ಪಾಲನ ಅಧಿಕಾರಿಯದ್ದಾಗಿರುತ್ತದೆ ಎಂದು ಕೇಂದ್ರ ಸರಕಾರ ಹೊಸ ನಿಯಮ ಜಾರಿಗೆ ಬಂದಿತ್ತು. ಸಾಮಾಜಿಕ ಮಾಧ್ಯಮಗಳಿಗೆ ಮೂಗುದಾರ ಹಾಕಲು ಕೇಂದ್ರ ಮುಂದಾಗಿತ್ತು.