ರಾಮ್ ದೇವ್ ಅವರ ಕೊರೊನಿಲ್ ಉತ್ತರಾಖಂಡದ ಕೋವಿಡ್ ಕಿಟ್ ಗೆ ಸೇರ್ಪಡೆ: ಭಾರತೀಯ ವೈದ್ಯಕೀಯ ಸಂಘ ಆಕ್ಷೇಪ

ಹೊಸದಿಲ್ಲಿ: ಯೋಗ ಗುರು ರಾಮ್ ದೇವ್ ಪ್ರಚಾರ ಮಾಡುತ್ತಿರುವ ಪತಂಜಲಿ ಆಯುರ್ವೇದದ ಕೊರೊನಿಲ್ ಅನ್ನು ಉತ್ತರಾಖಂಡ ಸರಕಾರದ ಕೋವಿಡ್ -19 ಕಿಟ್‌ನಲ್ಲಿ ಸೇರಿಸುವುದು "ಮಿಕ್ಸೋಪತಿ" ಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘ ಉತ್ತರಾಖಂಡ ಘಟಕ ಶನಿವಾರ ಟೀಕಿಸಿದೆ.
ಕೊರೊನಿಲ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅನುಮೋದಿಸಿಲ್ಲ ಹಾಗೂ ಆಯುರ್ವೇದ ಔಷಧಿಯನ್ನು ಕೇಂದ್ರ ಸರಕಾರದ ಮಾರ್ಗಸೂಚಿಗಳಲ್ಲಿ ಸೇರಿಸಲಾಗಿಲ್ಲ ಎಂದು ಉಲ್ಲೇಖಿಸಿರುವ ವೈದ್ಯರ ಸಂಘವು, "ಅಲೋಪಥಿಕ್ ಔಷಧಿಗಳೊಂದಿಗೆ ಕೊರೊನಿಲ್ ಅನ್ನು ಸೇರಿಸುವುದರಿಂದ ಮಿಕ್ಸೋಪತಿ ( ಆಯುರ್ವೇದ ಹಾಗೂ ಅಲೋಪತಿಯ ಮಿಶ್ರಣ)ಆಗಿದೆ. ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ ಇದನ್ನು ಅನುಮತಿಸಲಾಗುವುದಿಲ್ಲ ಹಾಗೂ ಅದನ್ನು ಬಳಸುವುದು ನ್ಯಾಯಾಂಗ ನಿಂದನೆ"ಎಂದು ಹೇಳಿದೆ.
ಕೋವಿಡ್-19 ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿಕೊಳ್ಳುವ ಕೊರೊನಿಲ್ ಅನ್ನು ಫೆಬ್ರವರಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿತ್ತು.
ಕೊರೊನಿಲ್ ರಾಜ್ಯದ ರೋಗಿಗಳಿಗೆ ಹರ್ಯಾಣ ಸರಕಾರ ನೀಡುವ ಉಚಿತ ಕೋವಿಡ್ ಕಿಟ್‌ನ ಭಾಗವಾಗಲಿದೆ ಎಂದು ರಾಜ್ಯದ ಆರೋಗ್ಯ ಸಚಿವರು ಕಳೆದ ತಿಂಗಳು ಹೇಳಿಕೆ ನೀಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿತ್ತು.