ನೈಜೀರಿಯಾದಲ್ಲಿ ಟ್ವಿಟರ್ ಸ್ಥಾನ ಆಕ್ರಮಿಸಲು ಲಗ್ಗೆ ಇಟ್ಟ ಕೂ

photo: The quint
ಹೊಸದಿಲ್ಲಿ: ನೈಜೀರಿಯಾದಲ್ಲಿ ಭಾರತೀಯ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಲಭ್ಯವಿದೆ ಹಾಗೂ ಆ ದೇಶದ ಬಳಕೆದಾರರಿಗಾಗಿ ಹೊಸ ಸ್ಥಳೀಯ ಭಾಷೆಗಳನ್ನು ಸೇರಿಸಲು ಉತ್ಸುಕವಾಗಿದೆ ಎಂದು ಭಾರತೀಯ ಸಾಮಾಜಿಕ ಜಾಲತಾಣ ಕಂಪೆನಿ ಕೂ ಶನಿವಾರ ಹೇಳಿದೆ.
ನೈಜೀರಿಯ ಸರಕಾರವು ಬೆಂಗಳೂರು ಮೂಲದ ಕೂ ಕಂಪೆನಿಯ ಪ್ರತಿಸ್ಪರ್ಧಿ ಅಮೆರಿಕದ ಕಂಪೆನಿ ಟ್ವಿಟರ್ ಅನ್ನು ತನ್ನ ದೇಶದಲ್ಲಿ ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸುವುದಾಗಿ ಘೋಷಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ಶನಿವಾರ ಕೂನಲ್ಲಿನ ಪೋಸ್ಟ್ ನಲ್ಲಿ ಅದರ ಸಹ-ಸಂಸ್ಥಾಪಕ ಹಾಗೂ ಸಿಇಒ ಅಪ್ರಮೇಯ ರಾಧಾಕೃಷ್ಣ ಅವರು ಕೂ ವೇದಿಕೆ ‘ನೈಜೀರಿಯಾದಲ್ಲಿ ಲಭ್ಯವಿದೆ’ ಎಂದು ಹೇಳಿದರು.
“ನಾವು ಅಲ್ಲಿನ ಸ್ಥಳೀಯ ಭಾಷೆಗಳನ್ನು ಸಹ ಸಕ್ರಿಯಗೊಳಿಸುವ ಬಗ್ಗೆ ಯೋಚಿಸುತ್ತಿದ್ದೇವೆ’’ ಎಂದು ರಾಧಾಕೃಷ್ಣ ಹೇಳಿದರು.
ಪಿಟಿಐ ಜೊತೆ ಮಾತನಾಡಿದ ರಾಧಾಕೃಷ್ಣ “ಈಗ ನೈಜೀರಿಯಾದಲ್ಲಿ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ಗಳಿಗೆ ಅವಕಾಶವಿದೆ ... ಕೂ ಸ್ಥಳೀಯ ಆ್ಯಪ್ನಲ್ಲಿ ಸ್ಥಳೀಯ ನೈಜೀರಿಯನ್ ಭಾಷೆಗಳನ್ನು ಪರಿಚಯಿಸಲು ನೋಡುತ್ತಿದೆ. ನೈಜೀರಿಯನ್ ಮಾರುಕಟ್ಟೆಯಲ್ಲಿ ವಿಸ್ತರಿಸಲು ಕೂ ಪ್ಲಾಟ್ ಫಾರ್ಮ್ ಉತ್ಸುಕವಾಗಿದೆ’’ ಎಂದು ರಾಧಾಕೃಷ್ಣ ಹೇಳಿದರು.
‘ಕೂ ಅವರು ಕಾರ್ಯನಿರ್ವಹಿಸುವ ಪ್ರತಿಯೊಂದು ದೇಶದ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರುತ್ತದೆ’ ಎಂದು ರಾಧಾಕೃಷ್ಣ ಹೇಳಿದರು.
ರಾಧಾಕೃಷ್ಣ ಹಾಗೂ ಮಾಯಾಂಕ್ ಬಿಡಾವತ್ಕಾ ಅವರು ಸ್ಥಾಪಿಸಿದ ಕೂ, ಬಳಕೆದಾರರಿಗೆ ತಮ್ಮನ್ನು ಅಭಿಪ್ರಾಯ ವ್ಯಕ್ತಪಡಿಸಲು ಹಾಗೂ ಭಾರತೀಯ ಭಾಷೆಗಳಲ್ಲಿ ವೇದಿಕೆಯಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಲು ಕಳೆದ ವರ್ಷ ಆರಂಭವಾಗಿತ್ತು. ಇದು ಹಿಂದಿ, ತೆಲುಗು ಹಾಗೂ ಬಂಗಾಳಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಲಭ್ಯವಿದೆ.
ಅಧ್ಯಕ್ಷ ಮುಹಮ್ಮದು ಬುಹಾರಿ ಪ್ರತ್ಯೇಕತಾವಾದಿ ಚಳವಳಿಯ ಬಗ್ಗೆ ಮಾಡಿದ ವಿವಾದಾತ್ಮಕ ಟ್ವೀಟ್ ಅನ್ನುಟ್ವಿಟರ್ ಕಂಪನಿಯು ತೆಗೆದುಹಾಕಿದ ಒಂದು ದಿನದ ನಂತರ, ನೈಜೀರಿಯಾ ಸರಕಾರವು ಟ್ವಿಟರ್ ಅನ್ನು ಅನಿರ್ದಿಷ್ಟವಾಗಿ ಅಮಾನತುಗೊಳಿಸುತ್ತಿದೆ ಎಂದು ಹೇಳಿತ್ತು.
ಕೂ 60 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದ್ದು, ಇತ್ತೀಚೆಗೆ ಟೈಗರ್ ಗ್ಲೋಬಲ್ ನೇತೃತ್ವದಲ್ಲಿ 30 ಮಿಲಿಯನ್ (ಸುಮಾರು 218 ಕೋಟಿ ರೂ.) ಸಂಗ್ರಹಿಸಿತ್ತು.