ಹವಾಮಾನ ನ್ಯಾಯದ ನಾಯಕನಾಗಿ ಭಾರತ ಹೊರಹೊಮ್ಮುತ್ತಿದೆ: ಪ್ರಧಾನಿ
ಜಾಗತಿಕ ಪರಿಸರ ದಿನಾಚರಣೆ

ಹೊಸದಿಲ್ಲಿ, ಜೂ. 4: ಜಾಗತಿಕ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘‘ಭಾರತದಲ್ಲಿ 2020-2025ರಲ್ಲಿ ಎಥೆನಾಲ್ ಮಿಶ್ರಣಕ್ಕಿರುವ ಮಾರ್ಗಸೂಚಿ ಕುರಿತ ತಜ್ಞರ ಸಮಿತಿಯ ವರದಿ’’ಯನ್ನು ಬಿಡುಗಡೆ ಮಾಡಿದರು. ‘‘ಜಾಗತಿಕ ಪರಿಸರ ದಿನಾಚರಣೆಯಾದ ಇಂದು ಭಾರತ ಇನ್ನೊಂದು ಅತಿ ದೊಡ್ಡ ಹೆಜ್ಜೆ ಇರಿಸಿದೆ. ಎಥೆನಾಲ್ ವಲಯವನ್ನು ಅಭಿವೃದ್ಧಿಪಡಿಸುವ ವಿಸ್ತೃತ ಮಾರ್ಗ ಸೂಚಿಯನ್ನು ಈಗಷ್ಟೇ ಬಿಡುಗಡೆ ಮಾಡಿದೆ’’ ಎಂದು ಪ್ರಧಾನಿ ಅವರು ದೇಶವನ್ನು ಉದ್ದೇಶಿಸಿ ಹೇಳಿದರು.
‘‘ಏಳೆಂಟು ವರ್ಷಗಳ ಹಿಂದಿನ ವರೆಗೆ ದೇಶದಲ್ಲಿ ಎಥೆನಾಲ್ ಬಗ್ಗೆ ಅಪರೂಪವಾಗಿ ಚರ್ಚೆ ಮಾಡಲಾಗುತ್ತಿತ್ತು. ಆದರೆ, ಈಗ 21ನೇ ಶತಮಾನದ ಭಾರತದಲ್ಲಿ ಎಥೆನಾಲ್ ಒಂದು ಪ್ರಮುಖ ಆದ್ಯತೆಯಾಗಿದೆ’’ ಎಂದು ಅವರು ಹೇಳಿದರು. ‘‘ಎಥೆನಾಲ್ ಬಗ್ಗೆ ಗಮನ ಕೇಂದ್ರೀಕರಿಸುವುದರಿಂದ ಪರಿಸರ ಹಾಗೂ ರೈತರ ಮೇಲೆ ಉತ್ತಮ ಪರಿಣಾಮ ಉಂಟಾಗಲಿದೆ. ಇಂದು ನಾವು 2025ರ ಒಳಗೆ ಪೆಟ್ರೋಲ್ನಲ್ಲಿ ಶೇ. 20 ಎಥೆನಾಲ್ ಮಿಶ್ರಣ ಮಾಡುವ ಗುರಿ ತಲಪುವಲ್ಲಿ ಸಫಲರಾಗಬೇಕೆಂದು ನಿರ್ಧರಿಸಿದ್ದೇವೆೆ’’ ಎಂದು ಅವರು ತಿಳಿಸಿದರು.
ಸುಸ್ಥಿರ ಅಭಿವೃದ್ಧಿ ಬಗ್ಗೆ ಕೇಂದ್ರ ಸರಕಾರದ ಪ್ರಯತ್ನದ ಬಗ್ಗೆ ಗಮನ ಸೆಳೆದ ಪ್ರಧಾನಿ ಅವರು, ‘‘ನಮ್ಮ ನವೀಕರಿಸಬಹುದಾದ ಇಂಧನದ ಸಾಮರ್ಥ್ಯ ಆರೇಳು ವರ್ಷಗಳಿಂದ ಶೇ. 250ಕ್ಕೂ ಹೆಚ್ಚಿದೆ. ನವೀಕರಿಸಬಹುದಾದ ಇಂಧನದ ಸಾಮರ್ಥ್ಯವನ್ನು ಅಳವಡಿಸಿದ ವಿಚಾರದಲ್ಲಿ ಜಗತ್ತಿನ ಅತ್ಯುನ್ನತ 5 ರಾಷ್ಟ್ರಗಳಲ್ಲಿ ಭಾರತ ಕೂಡ ಇಂದು ಸೇರಿದೆ. ಇದರೊಂದಿಗೆ ಸೌರ ವಿದ್ಯುತ್ ಸಾಮರ್ಥ್ಯ ಕೂಡ ಕಳೆದ 6 ವರ್ಷಗಳಿಂದ ಸುಮಾರು 15 ಪಟ್ಟು ಹೆಚ್ಚಾಗಿದೆ’’ ಎಂದು ಅವರು ತಿಳಿಸಿದರು.
ಆರ್ಥಿಕತೆ ಹಾಗೂ ಪರಿಸರ ಜೊತೆಯಾಗಿ ಸಾಗುವ ಪಥವನ್ನು ಭಾರತ ಆಯ್ಕೆ ಮಾಡಿದೆ ಎಂದು ಪ್ರಧಾನಿ ಅವರು ಹೇಳಿದರು. ಈ ಸಂದರ್ಭ ಪ್ರಧಾನಿ ಅವರು ಎಥೆನಾಲ್ ಉತ್ಪಾದಿಸುವ ಹಾಗೂ ಪೂರೈಸುವ ಮಹತ್ವಾಕಾಂಕ್ಷೆಯ ಇ-100 ಪೈಲೆಟ್ ಯೋಜನೆಯನ್ನು ಲೋಕಾರ್ಪಣೆಗೊಳಿಸಿದರು.