ವಿಜಯ ಮಲ್ಯನ ರಿಯಲ್ ಎಸ್ಟೇಟ್ ಸೊತ್ತು, ಭದ್ರತಾ ಪತ್ರಗಳ ಮಾರಾಟಕ್ಕೆ ಬ್ಯಾಂಕ್ ಗಳಿಗೆ ನ್ಯಾಯಾಲಯ ಅನುಮತಿ

ಹೊಸದಿಲ್ಲಿ, ಜೂ. 5: ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಅವರ ಸಾಲ ವಸೂಲಾತಿಗೆ ಅವರ ನಿರ್ದಿಷ್ಟ ರಿಯಲ್ ಎಸ್ಟೇಟ್ ಸೊತ್ತುಗಳು ಹಾಗೂ ಭದ್ರತೆಗಳನ್ನು ಮಾರಾಟ ಮಾಡಲು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ನ್ಯಾಯಾಲಯ ಬ್ಯಾಂಕ್ ಗಳಿಗೆ ಅನುಮತಿ ನೀಡಿದೆ.
ಪಾವತಿಸಲು ಬಾಕಿ ಇರುವ 5,600 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಾಲವನ್ನು ವಸೂಲಾತಿಗೆ ಉದ್ಯಮಿ ವಿಜಯ ಮಲ್ಯನ ನಿರ್ದಿಷ್ಟ ರಿಯಲ್ ಎಸ್ಟೇಟ್ ಸೊತ್ತುಗಳು ಹಾಗೂ ಭದ್ರತಾ ಪತ್ರಗಳನ್ನು ಮಾರಾಟ ಮಾಡಲು ಪಿಎಂಎಲ್ಎ ಬ್ಯಾಂಕ್ ಗಳಿಗೆ ಅನುಮತಿ ನೀಡಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಆಡಳಿತ ನಿರ್ದೇಶಕ ಮಲ್ಲಿಕಾರ್ಜುನ ರಾವ್ ಅವರು ಹೇಳಿದ್ದಾರೆ. ‘‘ಈಗ ಲೀಡ್ ಬ್ಯಾಂಕ್ ಈ ಸೊತ್ತನ್ನು ಮಾರಾಟ ಮಾಡಬಹುದು. ಕಿಂಗ್ ಫಿಶರ್ ನಮಗೆ ಮರು ಪಾವತಿಸಲು ಹೆಚ್ಚು ಸಾಲ ಇಲ್ಲ. ಆದರೆ, ಲೀಡ್ ಬ್ಯಾಂಕ್ ಮಲ್ಯರ ಸೊತ್ತು ಹಾಗೂ ಭದ್ರತಾ ಪತ್ರಗಳನ್ನು ಮಾರಾಟ ಮಾಡಿದ ಬಳಿಕೆ ನಮಗೆ ಬರಬೇಕಾದ ಪಾಲನ್ನು ನಾವು ಪಡೆಯಲಿದ್ದೇವೆ’’ ಎಂದು ರಾವ್ ಹೇಳಿದ್ದಾರೆ.
ಕಾರ್ಯಾಚರಣೆ ಸ್ಥಗಿತಗೊಳಿಸಿದ ಕಿಂಗ್ ಫಿಶರ್ ಏರ್ಲೈನ್ಸ್ ಪಡೆದುಕೊಂಡ 9,000 ಕೋಟಿಗೂ ಅಧಿಕ ಸಾಲ ಮರು ಪಾವತಿಸದೆ ವಂಚಿಸಿದ ಪ್ರಕರಣದ ಆರೋಪಿಯಾಗಿರುವ ವಿಜಯ ಮಲ್ಯ ಪ್ರಸ್ತುತ ಬ್ರಿಟನ್ ನಲ್ಲಿ ಇದ್ದಾರೆ. ಮುಂಬೈಯ ವಿಶೇಷ ನ್ಯಾಯಾಲಯ 2019 ಜನವರಿಯಲ್ಲಿ ವಿಜಯ ಮಲ್ಯನನ್ನು ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಿಸಿತ್ತು.