ಕೋವಿಡ್ 3ನೇ ಅಲೆ ಮಕ್ಕಳಿಗೆ ಬಾಧಿಸದಂತೆ ಮುಂಜಾಗ್ರತಾ ಕ್ರಮ ಅಗತ್ಯ : ಡಾ.ಕುಮಾರ್

ಮಂಗಳೂರು, ಜೂ.5: ಕೋವಿಡ್ 3ನೇ ಅಲೆಯು ಮಕ್ಕಳಿಗೆ ಬಾಧಿಸದಂತೆ ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ದ.ಕ.ಜಿಪಂ ಸಿಇಒ ಡಾ. ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದ.ಕ.ಜಿಪಂ ಕಚೇರಿ ಸಭಾಂಗಣದಲ್ಲಿ ಕೋವಿಡ್ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸುವ ಕುರಿತು ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ 3 ನೇ ಅಲೆಯು ಕೋವಿಡ್ ನಿರೋಧಕ ಚುಚ್ಚುಮದ್ದು ಹೊಂದದೇ ಇರುವ ಮಕ್ಕಳನ್ನು ಬಾಧಿಸುವ ಸಾಧ್ಯತೆಗಳಿವೆ, ತಜ್ಞರ ಅಭಿಪ್ರಾಯವೂ ಕೂಡ ಇದೇ ಆಗಿದೆ. ಈ ಹಿನ್ನಲೆಯಲ್ಲಿ ಕೊರೋನ ಸೋಂಕು ಮಕ್ಕಳಿಗೆ ಹರಡದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕೊರೋನ ಸೋಂಕಿನಿಂದ ದೂರವಿರಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪೋಷಕರಿಗೆ ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಮಕ್ಕಳ ಸಂರಕ್ಷಣೆಗೆ ಸಂಬಂಧಿಸದಂತೆ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ಪಾಲನಾ ಕೇಂದ್ರಗಳಲ್ಲಿರುವ ಮಕ್ಕಳ ಹೆಸರನ್ನು ಒಳಗೊಂಡ ವಿವರ, ಕೋವಿಡ್‌ನಿಂದ ತಂದೆತಾಯಿ ಕಳೆದುಕೊಂಡವರು ಹಾಗೂ ಏಕಪೋಷಕರ ಮಗುವಿನ ಸಮಗ್ರ ಮಾಹಿತಿಯನ್ನು ಕ್ರೋಢಿಕರಿಸಿ ಅಂತಹ ಮಕ್ಕಳ ಸ್ಥಿತಿಗತಿ ಅವರ ಶಿಕ್ಷಣ, ಮನಸ್ಥಿತಿಯನ್ನು ತಿಳಿದು ಎಲ್ಲಾ ರೀತಿಯ ನೆರವು, ಸೌಲಭ್ಯ ಕಲ್ಪಿಸಬೇಕು ಎಂದು ಡಾ.ಕುಮಾರ್ ಹೇಳಿದರು.
ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಆನಂದ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದೇರ್ಶಕ ಪಾಪಬೋವಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.







