ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿ ಸೆರೆ
ಮಂಗಳೂರು, ಜೂ.5: ನಗರ ಹೊರವಲಯದ ಪಡೀಲ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಎಎಸ್ಸೈಯ ಸಮವಸ್ತ್ರ ಹಿಡಿದು ಜಗ್ಗಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿ ಫೈಸಲ್ ನಗರದ ಪುಚ್ಚೆ ನಿಶಾಕ್ (23) ಎಂಬಾತನನ್ನು ಶನಿವಾರ ಬಂಧಿಸಲಾಗಿದೆ.
ಕಂಕನಾಡಿ ನಗರ ಠಾಣೆಯ ಎಎಸ್ಸೈ ನವೀನ ಲಾಕ್‌ಡೌನ್ ನಿಮಿತ್ತ ಗುರುವಾರ ಪೂ.11:15ರ ವೇಳೆಗೆ ಪಡೀಲ್ ಚೆಕ್‌ಪಾಯಿಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆವಾಗ ನಂಬರ್ ಪ್ಲೇಟ್ ಇಲ್ಲದ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೆ ಬಂದ ಇಬ್ಬರನ್ನು ನಿಲ್ಲಿಸಿ ವಿಚಾರಿಸಿ ದಾಗ ಬೈಕ್‌ನಲ್ಲಿದ್ದವರು ‘ನಿಮಗೆ ವಾಹನ ನಿಲ್ಲಿಸುವ, ಕೇಸು ಮಾಡುವ ಅಧಿಕಾರ ಇದೆಯಾ ? ವಾಹನ ನಿಲ್ಲಿಸಲು ನೀವು ಯಾರು ?’ ಎಂದು ಪ್ರಶ್ನಿಸಿದ್ದರು ಎನ್ನಲಾಗಿದೆ.
ಈ ಸಂದರ್ಭ ಸಹಸವಾರ ಪುಚ್ಚೆ ನಿಶಾಕ್ ಎಂಬಾತ ಎಎಸ್ಸೈಯ ಸಮವಸ್ತ್ರ ಹಿಡಿದು ಜಗ್ಗಾಡಿದ್ದ. ಆತನನ್ನು ಹಿಡಿಯಲು ಯತ್ನಿಸಿದಾಗ ಬೈಕ್‌ನಿಂದ ಹಾರಿ ತಪ್ಪಿಸಿಕೊಂಡಿಗಿದ್ದ. ಬೈಕ್ ಸವಾರ ಟೊಪ್ಪಿ ನೌಫಾಲ್ ಕೂಡ ಬೈಕ್‌ನ್ನು ಬಿಟ್ಟು ಪರಾರಿಯಾಗಿದ್ದ ಎಂದು ದೂರಲಾಗಿದೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.





