ಚಿಕ್ಕಮಗಳೂ: ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದ ವ್ಯಕ್ತಿ ಆತ್ಮಹತ್ಯೆ

ಚಿಕ್ಕಮಗಳೂರು, ಜೂ.5: ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶನಿವಾರ ನಗರದ ಕೋಟೆ ಬಡಾವಣೆಯಲ್ಲಿ ವರದಿಯಾಗಿದೆ.
ಶಿವಮೊಗ್ಗ ಮೂಲದ ಚಾಲಕ ವೃತ್ತಿಯ ಅಝ್ಮತ್ (45) ಚಿಕ್ಕಮಗಳೂರು ನಗರದಲ್ಲಿ ಆತ್ಮಹತ್ಯೆ ಶರಣಾದ ವ್ಯಕ್ತಿ. ಈತನಿಗೆ ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಯುವತಿಯೊಂದಿಗೆ ವಿವಾಹವಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಪತಿ ಪತ್ನಿ ನಡುವೆ ಆಗಾಗ್ಗ ಜಗಳ ನಡೆಯುತ್ತಿದ್ದು, ಇತ್ತೀಚೆಗೆ ಅಝ್ಮತ್ ಬೆಂಗಳೂರಿನಲ್ಲಿ ತನ್ನ ಪತ್ನಿಯ ಕುತ್ತಿಗೆಗೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಈ ಘಟನೆ ಸಂಬಂಧ ಅಝ್ಮತ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಪೊಲೀಸರ ಬಂಧನ ಭೀತಿಯಿಂದ ಆತ ಚಿಕ್ಕಮಗಳೂರಿನಲ್ಲಿ ಮೊದಲೇ ಪರಿಚಯವಿದ್ದ ವಿವಾಹಿತ ಮಹಿಳೆಯ ಮನೆಯಲ್ಲಿ ಉಳಿದುಕೊಂಡಿದ್ದ ಎಂದು ತಿಳಿದು ಬಂದಿದೆ.
ಶನಿವಾರ ಮುಂಜಾನೆ ನಗರದ ಕೋಟೆ ಬಡಾವಣೆಯ ಬಾಡಿಗೆ ಮನೆಯಲ್ಲಿದ್ದ ವೇಳೆ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಿದ್ದ ಅಝ್ಮತ್ ಮನೆಯವರು ಹಿಂದಿರುಗಿ ಬರುವಷ್ಟರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತಿಳಿದು ಬಂದಿದೆ. ಅಝ್ಮತ್ ನೇಣಿಗೆ ಶರಣಾಗಿದ್ದ ಮನೆಯಲ್ಲಿ ವಿವಾಹವಾಗಿ ಪತಿಯನ್ನು ತೊರೆದಿದ್ದ ಮತ್ತೊಂದು ಕೋಮಿನ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಿದ್ದು, ಅಝ್ಮತ್ ಗೆ ಈ ಮಹಿಳೆಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದು, ಚಾಲಕನಾಗಿದ್ದರಿಂದ ಆಗಾಗ್ಗೆ ಆತ ಈ ಮನೆಗೆ ಬರುತ್ತಿದ್ದ ಎಂದು ತಿಳಿದು ಬಂದಿದೆ.
ಕೆಲ ದಿನಗಳಿಂದ ಮಹಿಳೆಯ ಮನೆಯಲ್ಲಿದ್ದ ಅಝ್ಮತ್ ಶನಿವಾರ ಬೆಳಗ್ಗೆ ಆತ್ಮಹತ್ಯಗೆ ಶರಣಾಗಿದ್ದಾನೆಂದು ತಿಳಿದು ಬಂದಿದೆ. ನಗರ ಠಾಣೆಯ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವ ಪರೀಕ್ಷೆ ಬಳಿಕ ಮೃತದೇಹವನ್ನು ಯುವಕನ ಸಂಬಂಧಿಗಳಿಗೆ ಒಪ್ಪಿಸಲಾಗಿದೆ.







