ಸೌಂದರ್ಯ ಸ್ಪರ್ಧೆ, ಉದ್ಯಮದಲ್ಲಿ ಕಾನೂನು ಬಾಹಿರವಾಗಿ ‘ಖಾದಿ’ ಬಳಸದಂತೆ ಹೈಕೋರ್ಟ್ ನಿಷೇಧ

ಹೊಸದಿಲ್ಲಿ, ಜೂ. 4: ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗ (ಕೆವಿಐಸಿ)ದ ‘ಖಾದಿ’ ಬ್ರಾಂಡ್ ಹೆಸರನ್ನು ಕಾನೂನು ಬಾಹಿರವಾಗಿ ಬಳಸಿಕೊಂಡು ಖಾಸಗಿ ಸಂಸ್ಥೆಗಳು ಸೌಂದರ್ಯ ಸ್ಪರ್ಧೆ ಹಾಗೂ ಇತರ ಉದ್ಯಮ ಚಟುವಟಿಕೆಗನ್ನು ಆಯೋಜಿಸುವುದಕ್ಕೆ ಉಚ್ಚ ನ್ಯಾಯಾಲಯ ನಿಷೇಧ ವಿಧಿಸಿದೆ.
ನೋಯ್ಡಾ ಮೂಲದ ‘ಭಾರತದ ಖಾದಿ ವಿನ್ಯಾಸ ಮಂಡಳಿ’ (ಕೆಡಿಸಿಐ) ಹಾಗೂ ‘ಮಿಸ್ ಇಂಡಿಯಾ ಖಾದಿ ಫೌಂಡೇಶನ್’ ‘ಖಾದಿ’ ಬ್ರಾಂಡ್ ಹೆಸರು ಬಳಸಿಕೊಂಡು ಜನರನ್ನು ವಂಚಿಸುತ್ತಿದೆ ಎಂದು ಕೆವಿಐಸಿ ಆರೋಪಿಸಿದೆ. ಕೆವಿಐಸಿಯ ಟ್ರೇಡ್ಮಾರ್ಕ್ ‘ಖಾದಿ’ಯನ್ನೇ ಹೋಲುವ ಹೆಸರನ್ನು ಎರಡು ಸಂಸ್ಥೆಗಳು ಹೊಂದಿವೆ. ಆದುದರಿಂದ ಇದು ಟ್ರೇಡ್ಮಾರ್ಕ್ನ ಉಲ್ಲಂಘನೆಯಾಗಿದೆ ಎಂದು ಉಚ್ಚ ನ್ಯಾಯಾಲಯ ಹೇಳಿದೆ.
‘ಭಾರತೀಯ ಖಾದಿ ವಿನ್ಯಾಸ ಮಂಡಳಿ’ ಹಾಗೂ ‘ಮಿಸ್ ಇಂಡಿಯಾ ಖಾದಿ’ ಟ್ರೇಡ್ ಹೆಸರುಗಳ ಅಡಿಯಲ್ಲಿ ಇನ್ಸ್ಟಾಗ್ರಾಂ, ಯೂಟ್ಯೂಬ್, ಫೇಸ್ಬುಕ್ಗಳಲ್ಲಿರುವ ತಮ್ಮ ಸಾಮಾಜಿಕ ಜಾಲ ತಾಣದ ಖಾತೆಗಳನ್ನು ತೆಗೆದು ಹಾಕುವಂತೆ ‘ಭಾರತೀಯ ಖಾದಿ ವಿನ್ಯಾಸ ಮಂಡಳಿ’ ಹಾಗೂ ‘ಮಿಸ್ ಇಂಡಿಯಾ ಖಾದಿ’ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಂಕುಶ್ ಅನಾಮಿ ಹಾಗೂ ಪ್ರತಿವಾದಿಗಳಿಗೆ ಉಚ್ಚ ನ್ಯಾಯಾಲಯ ನಿರ್ದೇಶಿಸಿದೆ.





