ಭೂ ಕಬಳಿಕೆ ಬಂಡವಾಳ ಬಯಲಾಗಲಿದೆ ಎಂದು ಸಿಂಧೂರಿ ವರ್ಗಾವಣೆಗೆ ಪಿತೂರಿ: ವಾಟಾಳ್ ನಾಗರಾಜ್

ಮೈಸೂರು,ಜೂ.5: ಮೈಸೂರಿನಲ್ಲಿ ದೊಡ್ಡ ಮಟ್ಟದ ಭೂಕಬಳಿಕೆ ನಡೆದಿದೆ. ಇದರಿಂದ ಕೆಲವರ ಬಂಡವಾಳ ಬಯಲಾಗಲಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಪಿತೂರಿ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಬಾರದು ಎಂದು ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದ ಅವರು, ಸಮಗ್ರ ಭೂ ಒತ್ತುವರಿ, ಭೂಕಬಳಿಕೆ, ಭೂ ಮಾಫಿಯಾ ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 25 ವರ್ಷದಿಂದ ಮೈಸೂರಿನಲ್ಲಿ ಸಾಕಷ್ಟು ಭೂ ಹಗರಣ ನಡೆದಿದೆ. ಇದರ ಸಮಗ್ರ ತನಿಖೆಯನ್ನು ಜಿಲ್ಲಾಧಿಕಾರಿ ಮಾಡಬೇಕು. 25 ವರ್ಷದ ಕಡತಗಳನ್ನು ಪರಿಶೀಲನೆ ಮಾಡಬೇಕು. ಇದರ ಸಮಗ್ರ ತನಿಖೆ ಆಗುವವರೆಗೂ ನಾನು ಹೋರಾಟ ಮಾಡುತ್ತೇನೆ ಎಂದು ಹೇಳಿದರು.
ರೋಹಿಣಿ ಸಿಂಧೂರಿಯವರು ದಕ್ಷ ಅಧಿಕಾರಿ. ಅವರನ್ನು ವರ್ಗಾವಣೆ ಮಾಡಬಾರದು. ಅವರ ವರ್ಗಾವಣೆಗೆ ದೊಡ್ಡ ಪಿತೂರಿಯಾಗುತ್ತಿದೆ. ನನಗೂ ಯಡಿಯೂರಪ್ಪರಿಗೂ ಆಗಲ್ಲ, ಆದರೂ ಅವರಿಗೆ ನಾನು ಹೇಳುತ್ತೇನೆ ರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡಬಾರದು. ರೋಹಿಣಿ ಸಿಂಧೂರಿ ದಕ್ಷ ಅಧಿಕಾರಿಯಾಗಿದ್ದಾರೆ. ಯಾರು ಪಿತೂರಿ ಮಾಡುತ್ತಿದ್ದಾರೆ ಎಂಬುದನ್ನು ನಾನು ಹೇಳುವುದಿಲ್ಲ. ಕೆಲವರ ಬಂಡವಾಳ ಬಯಲಾಗಲಿದೆ ಎಂದು ಪಿತೂರಿ ನಡೆದಿದೆ ಎಂದು ಆರೋಪಿಸಿದರು.
ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಯಾವ ರೀತಿ ರದ್ದು ಮಾಡಿದ್ದಾರೆಯೋ ಅದೇ ರೀತಿ ಎಸೆಸೆಲ್ಸಿ ಪರೀಕ್ಷೆಯನ್ನೂ ರದ್ದು ಮಾಡಬೇಕು. ಎಲ್ಲರನ್ನು ಪರೀಕ್ಷೆ ಇಲ್ಲದೆ ಪಾಸು ಮಾಡಬೇಕು ಎಂದು ಒತ್ತಾಯಿಸಿದರು.







