'ಲಕ್ಷದ್ವೀಪ ಬೆಳವಣಿಗೆ ಬಗ್ಗೆ ಆತಂಕ' : 90ಕ್ಕೂ ಹೆಚ್ಚು ಮಾಜಿ ಉನ್ನತಾಧಿಕಾರಿಗಳಿಂದ ಪ್ರಧಾನಿ ಮೋದಿಗೆ ಪತ್ರ

ತಿರುವನಂತಪುರ,ಜೂ.6: ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರು ತೆಗೆದುಕೊಂಡಿರುವ ಸರಣಿ ವಿವಾದಾತ್ಮಕ ನಿರ್ಧಾರಗಳನ್ನು ವಿರೋಧಿಸಿ ದೇಶಾದ್ಯಂತದ 93 ನಿವೃತ್ತ ಹಿರಿಯ ಸರಕಾರಿ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದಾರೆ.
‘ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ,ಆದರೆ ತಟಸ್ಥತೆ ಮತ್ತು ಭಾರತೀಯ ಸಂವಿಧಾನದಲ್ಲಿ ನಂಬಿಕೆಯನ್ನು ಹೊಂದಿದ್ದೇವೆ’ ಎಂದು ಕಾನ್ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್ ಬರೆದಿರುವ ಪತ್ರದಲ್ಲಿ ತಿಳಿಸಿರುವ ಐಎಎಸ್,ಐಪಿಎಸ್ ಮತ್ತು ಐಎಫ್ಎಸ್ ಸೇರಿದಂತೆ ಈ ನಿವೃತ್ತ ಅಧಿಕಾರಿಗಳು,‘ತನ್ನ ಮೂಲಸ್ವರೂಪವನ್ನು ಉಳಿಸಿಕೊಂಡಿರುವ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಆತಂಕಕಾರಿ ಬೆಳವಣಿಗೆಗಳ ಬಗ್ಗೆ ನಮ್ಮ ತೀವ್ರ ಕಳವಳವನ್ನು ದಾಖಲಿಸಲು ನಿಮಗೆ ಈ ಪತ್ರವನ್ನು ಬರೆದಿದ್ದೇವೆ ’ ಎಂದು ಹೇಳಿದ್ದಾರೆ.
ಪಟೇಲ್ ಪ್ರಸ್ತಾವಿಸಿರುವ ವಿವಾದಾತ್ಮಕ ಕರಡು ಮಸೂದೆಗಳಿಗೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿರುವ ಅವರು,ಈ ಮಸೂದೆಗಳಲ್ಲಿ ಪ್ರತಿಯೊಂದೂ ಲಕ್ಷದ್ವೀಪ ಮತ್ತು ದ್ವೀಪನಿವಾಸಿಗಳ ತತ್ವಗಳು ಮತ್ತು ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ಬೃಹತ್ ಅಜೆಂಡಾದ ಭಾಗವಾಗಿರುವುದು ಸ್ಪಷ್ಟವಾಗಿದೆ. ಲಕ್ಷದ್ವೀಪದ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ನಿರ್ಧಾರಗಳು ಅಭಿವೃದ್ಧಿಯ ಪರವಾಗಿಲ್ಲ ಮತ್ತು ಲಕ್ಷದ್ವೀಪದ ಪರಿಸರ ಹಾಗೂ ಸಮಾಜವನ್ನು ಗೌರವಿಸುವ ಸ್ಥಾಪಿತ ಪದ್ಧತಿಗಳನ್ನು ಉಲ್ಲಂಘಿಸುವ ಭಿನ್ನ ಮತ್ತು ನಿರಂಕುಶ ನೀತಿ ನಿರೂಪಣೆಗಳಾಗಿವೆ. ದ್ವೀಪವಾಸಿಗಳೊಂದಿಗೆ ಸಮಾಲೋಚಿಸದೆ ಆಡಳಿತಾಧಿಕಾರಿಗಳ ಕ್ರಮಗಳು ಮತ್ತು ದೂರಗಾಮಿ ಪರಿಣಾಮವುಳ್ಳ ಪ್ರಸ್ತಾವಗಳು ಲಕ್ಷದ್ವೀಪ ಸಮಾಜ,ಆರ್ಥಿಕತೆ ಮತ್ತು ಭೂಪ್ರದೇಶದ ಮೇಲಿನ ದಾಳಿಯಾಗಿವೆ. ಈ ದ್ವೀಪಗಳನ್ನು ಪ್ರವಾಸಿಗಳು ಮತ್ತು ಹೊರಜಗತ್ತಿನ ಪ್ರವಾಸೋದ್ಯಮ ಹೂಡಿಕೆದಾರರಿಗಾಗಿ ರಿಯಲ್ ಎಸ್ಟೇಟ್ ನ ಒಂದು ಭಾಗವೆಂದಷ್ಟೇ ಪರಿಗಣಿಸಲಾಗುತ್ತಿದೆ ಎಂದಿದ್ದಾರೆ.
ಈ ವಿವಾದಾತ್ಮಕ ನಿರ್ಧಾರಗಳನ್ನು ಹಿಂದೆಗೆದುಕೊಳ್ಳಬೇಕು ಹಾಗೂ ಪೂರ್ಣಕಾಲಿಕ, ಜನಸಂವೇದನೆಯ ಮತ್ತು ಜವಾಬ್ದಾರಿಯುತ ಆಡಳಿತಾಧಿಕಾರಿಯನ್ನು ನೇಮಕಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪಟೇಲ್ ಅವರ ನಿರ್ಧಾರಗಳ ಬಗ್ಗೆ ಲಕ್ಷದ್ವೀಪದ ಸಂಸದ ಮುಹಮ್ಮದ್ ಫೈಝಲ್ ಅವರು ಕಳವಳ ವ್ಯಕ್ತಪಡಿಸಿದ ನಂತರ ಕೇರಳದ ಚುನಾಯಿತ ಕಾಂಗ್ರೆಸ್ ಮತ್ತು ಎಡರಂಗ ಜನಪ್ರತಿನಿಧಿಗಳು ಆಡಳಿತಾಧಿಕಾರಿಗಳ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ಲಕ್ಷದ್ವೀಪ ನಿವಾಸಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಈ ನಿರ್ಧಾರಗಳ ವಿರುದ್ಧ ಹಲವಾರು ಆನ್ಲೈನ್ ಅಭಿಯಾನಗಳಲ್ಲಿ ತೊಡಗಿಕೊಂಡಿದ್ದಾರೆ. ತನ್ಮಧ್ಯೆ ಕೇರಳದ ಉಭಯ ಪಕ್ಷಗಳ ಸಂಸದರ ನಿಯೋಗಗಳಿಗೆ ಲಕ್ಷದ್ವೀಪ ಪ್ರವೇಶಾವಕಾಶವನ್ನು ನಿರಾಕರಿಸಲಾಗಿದೆ.