ರೈತ ಮುಖಂಡರ ಬಂಧನದ ವಿರುದ್ಧ ಹರ್ಯಾಣದಲ್ಲಿ ಪ್ರತಿಭಟನೆ ಮುಂದುವರಿಸಿದ ರಾಕೇಶ್ ಟಿಕಾಯತ್

ಫತೇಹಾಬಾದ್: ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ ವಾರ ಆಕ್ರೋಶಗೊಂಡ ರೈತರು ಶಾಸಕರ ಮನೆಯೊಂದನ್ನು ಸುತ್ತುವರಿದ ನಂತರ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಯಾಣದ ಫತೇಹಾಬಾದ್ ಜಿಲ್ಲೆಯ ತೋಹಾನಾ ಪಟ್ಟಣದಲ್ಲಿ ತಮ್ಮ ಪ್ರತಿಭಟನೆಯನ್ನು ಮುಂದುವರಿಸಲು ರೈತ ಮುಖಂಡರು ನಿರ್ಧರಿಸಿದ್ದಾರೆ.
ಆಡಳಿತಾರೂಢ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಜೆಪಿಯ ಶಾಸಕ ದೇವೇಂದ್ರ ಸಿಂಗ್ ಬಬ್ಲಿಯನ್ನು ಬುಧವಾರ ರಾತ್ರಿ ಸುತ್ತುವರಿದ ಕಾರಣ ವಿಕಾಸ್ ಸಿಸಾರ್ ಹಾಗೂ ರವಿ ಆಝಾದ್ ಎಂಬ ಇಬ್ಬರು ರೈತ ಮುಖಂಡರನ್ನು ಬಂಧಿಸಲಾಗಿದೆ.
ಬಂಧಿತ ರೈತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ರೈತ ಮುಖಂಡರಾದ ರಾಕೇಶ್ ಟಿಕಾಯತ್ ಗುರ್ನಮ್ ಸಿಂಗ್ ಚಾದುನಿ ಹಾಗೂ ಯುನೈಟೆಡ್ ಕಿಸಾನ್ ಮೋರ್ಚಾ ನಾಯಕ ಯೋಗೇಂದ್ರ ಯಾದವ್ ನೇತೃತ್ವದಲ್ಲಿ ಶನಿವಾರ ರಾತ್ರಿಯಿಂದ ತೋಹಾನಾದ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸುತ್ತಿದ್ದಾರೆ.
ಕಳೆದ ಮಂಗಳವಾರ ಶಾಸಕರು ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ರೈತರ ಕುರಿತು ಅವಾಚ್ಯ ಶಬ್ದಗಳಿಂದ ಮಾಡಿರುವ ನಿಂದನೆಗೆ ಕ್ಷಮೆಯಾಚಿಸಿದರು.