ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ; ಭಾರತಕ್ಕೆ 117ನೆ ರ್ಯಾಂಕ್
ಕಳೆದ ವರ್ಷಕ್ಕಿಂತ 2 ರ್ಯಾಂಕ್ ಕುಸಿತಗೊಂಡು ಭೂತಾನ್,ನೇಪಾಳ, ಶ್ರೀಲಂಕಾ, ಬಾಂಗ್ಲಾಕ್ಕಿಂತಲೂ ಹಿಂದೆ ಸರಿದ ಭಾರತ

ಫೈಲ್ ಚಿತ್ರ
ಹೊಸದಿಲ್ಲಿ,ಜೂ.6: ಸುಸ್ಥಿರ ಅಭಿವೃದ್ಧಿಯ 17 ಗುರಿಗಳನ್ನು ಸಾಧಿಸುವಲ್ಲಿ ಭಾರತವು ಕಳೆದ ವರ್ಷಕ್ಕಿಂತ ಈ ಸಲ ಎರಡು ರ್ಯಾಂಕ್ ಗಳಷ್ಟು ಕೆಳಗೆ ಜಾರಿದೆ ಎಂದು ನೂತನ ವರದಿಯೊಂದುತಿಳಿಸಿದೆ.
ಸುಸ್ಥಿರ ಅಭಿವೃದ್ಧಿ ಗುರಿ (ಎಸ್ಡಿಜಿ) ಸಾಧನೆಯಲ್ಲಿ ಭಾರತದ ರ್ಯಾಂಕಿಂಗ್ ದಕ್ಷಿಣ ಏಶ್ಯದ ರಾಷ್ಟ್ರಗಳಾದ ಭೂತಾನ್, ನೇಪಾಳ, ಶ್ರೀಲಂಕಾ ಹಾಗೂ ಬಾಂಗ್ಲಾದೇಶಕ್ಕಿಂತಲೂ ಹಿಂದಿರುವುದಾಗಿ ವರದಿ ತಿಳಿಸಿದೆ. ಭಾರತದ ಒಟ್ಟಾರೆ ಎಸ್ಡಿಜಿ ಅಂಕವು 100ರಲ್ಲಿ 61.9 ಆಗಿದೆಯೆಂದು ವರದಿ ತಿಳಿಸಿದೆ.
ಕಳೆದ ವರ್ಷ ಭಾರತದ ಎಸ್ಡಿಜಿ ರ್ಯಾಂಕಿಂಗ್ 115 ಆಗಿದ್ದು, ಈ ಸಲ ಎರಡು ಸ್ಥಾನಗಳಷ್ಟು ಕೆಳಗೆ ಕುಸಿದು 117ಕ್ಕೆ ತಲುಪಿದೆಯೆಂದು ಅದು ಹೇಳಿದೆ. ಹಸಿವು ಕೊನೆಗೊಳಿಸುವುದು ಹಾಗೂ ಆಹಾರದ ಭದ್ರತೆಯನ್ನು ಸಾಧಿಸುವುದು, ಲಿಂಗ ಸಮಾನತೆ ಮತ್ತು ಚೈತನ್ಯಶೀಲ ಮೂಲಸೌಕರ್ಯಗಳ ನಿರ್ಮಾಣ, ಎಲ್ಲವನ್ನೂ ಒಳಗೊಂಡ ಹಾಗೂ ಸುಸ್ಥಿರವಾದ ಕೈಗಾರೀಕರಣ ಹಾಗೂ ಸಂಶೋಧನೆಯ ಬೆಳವಣಿಗೆ ಇವು ಭಾರತಕ್ಕೆ ಪ್ರಮುಖ ಸವಾಲುಗಳಾಗಿ ಇನ್ನೂ ಉಳಿದುಕೊಂಡಿವೆಯೆಂದು 2021ರ ಸಾಲಿನ ಭಾರತದ ಪರಿಸರ ಸ್ಥಿತಿ ವರದಿ ತಿಳಿಸಿದೆ.
ಎಸ್ಡಿಜಿ ಗುರಿಗಳನ್ನು ಸಾಧಿಸಲು ಭಾರತದ ರಾಜ್ಯಗಳು ಮಾಡಿಕೊಂಡಿರುವ ಸನ್ನದ್ಧತೆಯ ಬಗ್ಗೆಯೂ ವರದಿ ವಿಶ್ಲೇಷಿಸಿದೆ. ಜಾರ್ಖಂಡ್ ಹಾಗೂ ಬಿಹಾರ ರಾಜ್ಯಗಳು 2030ರೊಳಗೆ ಎಸ್ಡಿಜಿ ಗುರಿಗಳನ್ನು ಈಡೇರಿಸುವಲ್ಲಿ ಮಾಡಿಕೊಂಡಿರುವ ಸಿದ್ಧತೆಗಳು ಅತ್ಯಂತ ಕನಿಷ್ಠ ಮಟ್ಟದಲ್ಲಿವೆ ಎಂದು ವರದಿ ಹೇಳಿದೆ. ಜಾರ್ಖಂಡ್ ರಾಜ್ಯವು ಸುಸ್ಥಿರ ಅಭಿವೃದ್ಧಿಯ 5 ಗುರಿಗಳನ್ನು ಸಾಧಿಸುವಲ್ಲಿ ಹಿನ್ನಡೆಕಂಡಿದ್ದರೆ, ಬಿಹಾರ ಏಳರಲ್ಲಿ ಹಿಂದೆ ಬಿದ್ದಿದೆ.
2030ರೊಳಗೆ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವ ಕಾರ್ಯಸೂಚಿಯನ್ನು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು 2015ರಲ್ಲಿ ಅಂಗೀಕರಿಸಿದ್ದವು.
ವರ್ತಮಾನ ಹಾಗೂ ಭವಿಷ್ಯದಲ್ಲಿ ಜಗತ್ತಿನ ಜನತೆಗೆ ಶಾಂತಿ ಹಾಗೂ ಸಮೃದ್ಧಿಯನ್ನು ನೀಡುವ ನೀಲನಕ್ಷೆಯೊಂದನ್ನು ಕಾರ್ಯಸೂಚಿ ರೂಪಿಸಿತ್ತು.
ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಅಂಗೀಕರಿಸಿರುವ 17 ಎಸ್ಡಿಜಿ ಗುರಿಗಳು: 1. ಬಡತನ ನಿವಾರಣೆ 2. ಶೂನ್ಯ ಹಸಿವು, 3. ಉತ್ತಮ ಆರೋಗ್ಯ ಹಾಗೂ ಯೋಗಕ್ಷೇಮ ,4. ಲಿಂಗ ಸಮಾನತೆ, 6. ಶುದ್ಧ ನೀರು ಹಾಗೂ ನಿರ್ಮಲೀಕರಣ, 7. ಕೈಗೆಟಕುವ ದರದ ಮತ್ತು ಶುದ್ಧವಾದ ಇಂಧನ 8. ಸಭ್ಯವಾದ ಉದ್ಯೋಗ ಹಾಗೂ ಆರ್ಥಿಕ ಬೆಳವಣಿಗೆ, 9. ಕೈಗಾರಿಕೆ, ಸಂಶೋಧನೆ ಹಾಗೂ ಮೂಲಸೌಕರ್ಯ. 10. ಅಸಮಾನತೆಯನ್ನು ಕಡಿಮೆಗೊಳಿಸುವಿಕೆ, 11.ಸುಸ್ಥಿರವಾದ ನಗರಗಳು ಮತ್ತು ಮೂಲಸೌಕರ್ಯಗಳು, 12.ಜವಾಬ್ದಾರಿಯುತ ಖರೀದಿಸುವಿಕೆ ಮತ್ತು ಉತ್ಪಾದನೆ, 13.ವಾಯುಗುಣ ಸಂರಕ್ಷಣೆ, 14.ನೀರಿನಲ್ಲಿನ ಜೀವಸಂಕುಲ 15. ಭೂಮಿಯಲ್ಲಿನ ಜೀವಸಂಕುಲ 16. ಶಾಂತಿ, ನ್ಯಾಯ ಹಾಗೂ ಬಲಿಷ್ಠ ಶಾಸನಾತ್ಮಕ ಸಂಸ್ಥೆಗಳು 17. ಈ ಎಲ್ಲಾ ಗುರಿಗಳ ಸಾಧನೆಗೆ ಜಾಗತಿಕ ಮಟ್ಟದಲ್ಲಿ ಪಾಲುದಾರಿಕೆಯನ್ನು ಏರ್ಪಡಿಸಿಕೊಳ್ಳುವುದು.
ಪಾರಿಸಾರಿಕ ಕಾರ್ಯನಿರ್ವಹಣೆ ಭಾರತದ ಕಳಪೆ ಸಾಧನೆ:
ಪಾರಿಸಾರಿಕ ಕಾರ್ಯನಿರ್ವಹಣೆ ಸೂಚ್ಯಂಕ(ಇಪಿಐ)ದಲ್ಲಿ ಭಾರತವು 180 ರಾಷ್ಟ್ರಗಳ ಪಟ್ಟಿಯಲ್ಲಿ 168ನೇ ಸ್ಥಾನದಲ್ಲಿದ್ದು, ನಿರಾಶದಾಯಕ ಸಾಧನೆ ಮಾಡಿದೆ. ಪಾರಿಸಾರಿಕ ಆರೋಗ್ಯ, ಹವಾಮಾನ, ವಾಯುಮಾಲಿನ್ಯ, ನೈರ್ಮಲ್ಯ , ಕುಡಿಯುವ ನೀರು, ಪರಿಸರ ವ್ಯವಸ್ಥೆ ಸೇವೆಗಳು, ಜೀವವೈವಿಧ್ಯತೆ ಇತ್ಯಾದಿ ಪರಿಸರ ಸಂಬಂಧಿ ವಿಷಯಗಳನ್ನು ಇಪಿಐ ಸೂಚ್ಯಂಕದಿಂದ ಅಳೆಯಲಾಗುತ್ತದೆ.
ಪಾರಿಸಾರಿಕ ಆರೋಗ್ಯ ಶ್ರೇಣಿಯಲ್ಲಿ ಭಾರತದ ರ್ಯಾಂಕಿಂಗ್ ತೀರಾ ಕಳಪೆಯಾಗಿದ್ದು 172ನೇ ಸ್ಥಾನದಲ್ಲಿದೆ. ಪರಿಸರ ಹಾನಿಯಿಂದಾಗಿ ಆರೋಗ್ಯಕ್ಕೆ ಉಂಟಾಗುವ ಅಪಾಯಗಳಿಂದ ಜನತೆಯನ್ನು ರಕ್ಷಿಸಲು ದೇಶಗಳು ಯಾವ ಕ್ರಮಗಳನ್ನು ಕೈಗೊಂಡಿವೆಯೆಂಬುದನ್ನು ಸೂಚಿಸುವ ರ್ಯಾಂಕಿಂಗ್ ಇದಾಗಿದೆ.
ಜೀವವೈವಿಧ್ಯತೆ ಹಾಗೂ ವಾಸಸ್ಥಳ ಶ್ರೇಣಿಯಲ್ಲಿ ಭಾರತವು 148 ಸ್ಥಾನದಲ್ಲಿದ್ದು, ನೆರೆಯರಾಷ್ಟ್ರವಾದ ಪಾಕಿಸ್ತಾನಕ್ಕಿಂತ 21 ಸ್ಥಾನಗಳಷ್ಟು ಹಿಂದೆ ಸರಿದಿದೆ.