ಕೇಂದ್ರ ಸರಕಾರ ಕೋವಿಡ್ ನಿಭಾಯಿಸಿದ ರೀತಿಯ ಕುರಿತು ಜನರು ಆಕ್ರೋಶ ವ್ಯಕ್ತಪಡಿಸಿಲ್ಲ: ಶಿವರಾಜ್ ಸಿಂಗ್ ಚೌಹಾಣ್
"ಬಿಜೆಪಿ ವಿರೋಧಿ ಶಕ್ತಿಗಳು ತಪ್ಪು ಅಭಿಪ್ರಾಯ ಸೃಷ್ಟಿಸಲು ಯತ್ನಿಸುತ್ತಿವೆ"

ಭೋಪಾಲ್ : ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಿರುವ ರೀತಿಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಜನರು ಆಕ್ರೋಶ ಹೊಂದಿಲ್ಲ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಆಂಗ್ಲ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು "ಬಿಜೆಪಿ ವಿರೋಧಿ ಶಕ್ತಿಗಳು" ತಪ್ಪು ಅಭಿಪ್ರಾಯಗಳನ್ನು ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.
"ಪ್ರಧಾನಿಯ ಜನಪ್ರಿಯತೆ ಅಥವಾ ಅವರ ಕಾರ್ಯಾಶೈಲಿಯನ್ನು ಸಹಿಸದ ಒಂದು ವರ್ಗ ಈ ದೇಶದಲ್ಲಿದೆ ಹಾಗೂ ಅವರು ಕೇಂದ್ರ ಸರಕಾರ ಮತ್ತು ಬಿಜೆಪಿಯ ಮಾನಹಾನಿಗೈಯ್ಯುವ ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ" ಎಂದು ಚೌಹಾಣ್ ಹೇಳಿದರು.
"ಈ ವರ್ಗ ಸಾಂಕ್ರಾಮಿಕವನ್ನು ತನ್ನ ಉದ್ದೇಶ ಈಡೇರಿಸಿಕೊಳ್ಳಲು ಬಳಸುತ್ತಿದೆ. ಬಿಜೆಪಿ ಹಾಗೂ ಪ್ರಧಾನಿ ಮೋದಿಯವರು ಯೋಚಿಸುವ ರೀತಿಯನ್ನು ಈ ಶಕ್ತಿಗಳಿಗೆ ಸಹಿಸಲಾಗುತ್ತಿಲ್ಲ, ಅವುಗಳೇ ಇಂತಹ ತಪ್ಪು ಅಭಿಪ್ರಾಯಗಳ ಹಿಂದಿವೆ. ಪ್ರಧಾನಿಯ ನೇತೃತ್ವದಲ್ಲಿ ಕೇಂದ್ರ ಸರಕಾರವು ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ" ಎಂದು ಚೌಹಾಣ್ ಹೇಳಿಕೊಂಡರು.
ಕೋವಿಡ್ ಸಾವುಗಳ ಲೆಕ್ಕವನ್ನು ಕಡಿಮೆ ತೋರಿಸಲಾಗಿದೆ ಎಂಬ ಹಲವು ಮಾಧ್ಯಮ ವರದಿಗಳ ಕುರಿತು ಪ್ರತಿಕ್ರಿಯಿಸಿದ ಅವರು ಇಂತಹ ಒಂದು ವ್ಯಾಪಕ ಸಾಂಕ್ರಾಮಿಕದ ಸಂದರ್ಭ ಕೆಲವೊಂದು ಸಮಸ್ಯೆಗಳು ಸಹಜವಾಗಿ ಎದುರಾಗುತ್ತವೆ ಎಂದರು.
ಭೋಪಾಲ್ ನಗರದಲ್ಲಿ ಕೋವಿಡ್ ಸಾವುಗಳ ವಾಸ್ತವ ಸಂಖ್ಯೆ ಹಾಗೂ ವರದಿಯಾದ ಸಂಖ್ಯೆಯಲ್ಲಿನ ವ್ಯತ್ಯಾಸದ ಕುರಿತು ಪ್ರಶ್ನಿಸಿದಾಗ ಹಲವಾರು ಮಂದಿ ಕೋವಿಡ್ ಪರೀಕ್ಷೆ ನಡೆಸದೇ ಇದ್ದುದರಿಂದ ಹೀಗಾಗಿರಬಹುದು ಎಂದು ಹೇಳಿದರು