ಗರ್ಭಿಣಿ ಆಸ್ಪತ್ರೆ ಅಲೆದಾಟ, ವೈದ್ಯರ ಮೇಲೆ ಹಲ್ಲೆ ಆರೋಪ ಪ್ರಕರಣದ ತನಿಖೆ ನಡೆಸಲಾಗುವುದು: ಡಾ. ರಾಜೇಂದ್ರ

ಡಾ. ರಾಜೇಂದ್ರ
ಮಂಗಳೂರು, ಜೂ. 7: ಕೊರೋನ ಸೋಂಕಿತ ಗರ್ಭಿಣಿ ಆಸ್ಪತ್ರೆಗಳಿಗೆ ಅಲೆದಾಟ ಹಾಗೂ ವೈದ್ಯರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿ ಎರಡೂ ಕಡೆಯಿಂದ ದೂರು ಬಂದಿದ್ದು, ಆರೋಗ್ಯ ಇಲಾಖೆಯ ತನಿಖಾ ತಂಡದಿಂದ ತನಿಖೆ ನಡೆಸಿ ವರದಿ ನೀಡುವಂತೆ ತಿಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ತುರ್ತು ಸಂದರ್ಭದಲ್ಲಿ ಆರೋಗ್ಯ ಸೇವೆಯಲ್ಲಿ ತಪ್ಪುಗಳು ಆದಾಗ ಅದನ್ನು ಸೂಕ್ತ ಸಂಸ್ಥೆಗಳ ಮೂಲಕ ಬಗೆಹರಿಸಿಕೊಳ್ಳಬೇಕೇ ಹೊರತು ಮಾತು ಅಥವಾ ದೈಹಿಕ ದೌರ್ಜನ್ಯಕ್ಕೆ ಮುಂದಾಗಬಾರದು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.
ಇಂಡಿಯಾನ ಆಸ್ಪತ್ರೆಯಲ್ಲಿ ವೈದ್ಯರ ಮೇಲಿನ ಹಲ್ಲೆ ಆರೋಪದ ಪ್ರಕರಣದ ಕುರಿತಂತೆ ಸ್ಪಷ್ಟೀಕರಣ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಮಹಿಳಾ ನರ್ಸ್ ನೀಡಿದ ದೂರಿನ ಮೇರೆಗೆ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಪ್ರಕರಣ ವಾಪಾಸು ಪಡೆಯುವುದಾಗಿ ಹೇಳಿದಾಗ ಹಿರಿಯ ಅಧಿಕಾರಿಗಳನ್ನು ಕಳುಹಿಸಿ ಇಂಡಿಯಾನ ಆಸ್ಪತ್ರೆಯ ಮುಖ್ಯಸ್ಥರ ಜತೆ ಮಾತುಕತೆ ನಡೆಸಿದ್ದರು. ಬಳಿಕ ಖುದ್ದು ನಾನೇ ಹೋಗಿ ಯಾರಿಂದಲಾದರೂ ಪ್ರಕರಣ ಹಿಂಪಡೆಯಲು ಒತ್ತಡ ಇದೆಯೇ ಎಂಬುದಾಗಿಯೂ ಕೇಳಿದ್ದೆ. ಮತ್ತೊಮ್ಮೆ ಅವರಲ್ಲಿ ವಿನಂತಿಸಿಕೊಳ್ಳುತ್ತಿದ್ದು, ಬೇರೆ ರೀತಿಯಲ್ಲಿ ಕ್ರಮ ಆಗಬೇಕಿದ್ದರೆ ಹೊಸ ದೂರು ನೀಡಲಿ. ಅದು ಬಿಟ್ಟು ಅವರ ನಡುವಿನ ಗೊಂದಲಕ್ಕೆ ಪೊಲೀಸರನ್ನು ಮಧ್ಯೆ ತರುವುದು ಬೇಡ ಎಂದರು.







