ಪ್ರೀತಿಸುವಂತೆ ಯುವಕನ ಕಿರುಕುಳ ಆರೋಪ: ವಿಷ ಸೇವಿಸಿ ಯುವತಿ ಆತ್ಮಹತ್ಯೆ
ಯುವಕನ ವಿರುದ್ಧ ದೂರು ದಾಖಲು

ಶಿವಮೊಗ್ಗ, ಜೂ.7: ವಿಷ ಸೇವಿಸಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸನಗರ ತಾಲೂಕಿನ ಕರಿಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಯುವಕನೊಬ್ಬ ಪ್ರೀತಿಸುವಂತೆ ಬೆದರಿಕೆ ಹಾಕಿದ್ದೇ ಈ ಕೃತ್ಯಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಹೊಸನಗರ ತಾಲೂಕು ಕನ್ನಳ್ಳಿ ಸುಧಾಕರ್ ಅವರ ಪುತ್ರಿ ಸಹನಾ(17) ಆತ್ಮ ಹತ್ಯೆ ಮಾಡಿಕೊಂಡಾಕೆ. ಜೂನ್ 3 ರಂದು ಯುವತಿ ವಿಷ ಸೇವಿಸಿದ್ದಳು. ಕೂಡಲೇ ನಗರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಂದ ಹೊಸನಗರದ ಆಸ್ಪತ್ರೆಗೆ ರವಾನಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಹನಾ ಕೊನೆಯುಸಿರೆಳೆದಿದ್ದಾಳೆ.
ಯುವಕನ ವಿರುದ್ಧ ದೂರು: ಹೊಸನಗರದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಯುವತಿ ಸಹನಾಗೆ ಕೆಳಗಿನ ಕನ್ನಳ್ಳಿ ವಾಸಿ ಪ್ರಶಾಂತ್ ಕೆ.ವಿ ತನ್ನನ್ನು ಪ್ರೀತಿಸುವಂತೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಪ್ರಶಾಂತ ಮತ್ತು ಅವರ ಕುಟುಂಬದವರಿಗೆ ತಿಳಿ ಹೇಳಲಾಗಿತ್ತು. ಆದಾಗ್ಯು ಪ್ರಶಾಂತ್ ಪ್ರತಿದಿನ ಯುವತಿಗೆ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಅಲ್ಲದೆ ನನ್ನನ್ನು ಪ್ರೀತಿಸದಿದ್ದರೆ ನಿನ್ನನ್ನು ಬದುಕಲು ಬೀಡುವುದಿಲ್ಲ ಎನ್ನುತ್ತಿದ್ದ ಪ್ರಶಾಂತ್, ಒಂದೋ ನೀನು ಸಾಯಬೇಕು ಇಲ್ಲ ನನ್ನ ಪ್ರೀತಿಸಬೇಕು ಎಂದು ಬೆದರಿಸಿದ್ದ. ಇದರಿಂದ ಮನನೊಂದು ಯುವತಿ ಸಹನಾ ವಿಷ ಸೇವಿಸಿದ್ದಾಳೆ ಎಂದು ಆಕೆಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಮಗಳ ಸಾವಿಗೆ ಕಾರಣರಾದ ಪ್ರಶಾಂತ್‌ನನ್ನು ಕಾನೂನಿನ ಅಡಿಯಲ್ಲಿ ಶಿಕ್ಷೆ ನೀಡಬೇಕೆಂದು ಮಗಳನ್ನು ಕಳೆದುಕೊಂಡ ದಂಪತಿಗಳು ಒತ್ತಾಯಿಸಿದ್ದಾರೆ. ಈ ಘಟನೆ ಬೆನ್ನಲ್ಲೆ ಪ್ರಶಾಂತ್ ನಾಪತ್ತೆಯಾಗಿದ್ದಾನೆ.
ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







