ಕೊರೋನ ನಿಯಂತ್ರಿಸಲು ವಿಫಲವಾದ ಬಿಎಸ್‌ವೈ ರಾಜೀನಾಮೆ ನಾಟಕ ಆರಂಭಿಸಿದ್ದಾರೆ: ಕೆ.ಬಿ.ಪ್ರಸನ್ನ ಕುಮಾರ್

ಶಿವಮೊಗ್ಗ, ಜೂ.7: ಈಗಿರುವ ಲಾಕ್‌ಡೌನ್ ಅವೈಜ್ಞಾನಿಕವಾಗಿದ್ದು, ಲಾಕ್‌ಡೌನ್ ಈಶ್ವರಪ್ಪ ಎಂದೇ ಖ್ಯಾತಿ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರು ಇದನ್ನು ಸರಿಪಡಿಸಬೇಕು ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಕೆ.ಬಿ.ಪ್ರಸನ್ನ ಕುಮಾರ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಲಾಕ್‌ಡೌನ್ ಸಿಸ್ಟಮ್ ಅವೈಜ್ಞಾನಿಕವಾಗಿದೆ. ಲಾಕ್‌ಡೌನ್‌ನಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಇಂತಹ ಸಂದರ್ಭದಲ್ಲಿ ಜನೋಪಯೋಗಿ ಕೆಲಸ ಮಾಡುವುದು ಆಳುವ ಸರ್ಕಾರದ ಕರ್ತವ್ಯ. ಈಗ ಆಗುತ್ತಿರುವ ಸರ್ಕಾರದ ನಡವಳಿಕೆ ನೋಡಿದರೆ ಎಲ್ಲಾ ವಿಚಾರದಲ್ಲೂ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಲಾಕ್‌ಡೌನ್ ಜಾರಿಯಿಂದಾಗಿ ಜನರು ದಿನನಿತ್ಯದ ವಸ್ತುಗಳನ್ನು ಖರೀದಿಸಲು ಶಿವಮೊಗ್ಗದಲ್ಲಿ ಬೆಳಗ್ಗೆ 6 ರಿಂದ 8 ರವರೆಗೆ ಅವಕಾಶ ನೀಡಲಾಗಿದೆ. ಈ ಸಮಯದಲ್ಲಿ ಜನರು ಗುಂಪು ಗುಂಪಾಗಿ ವಸ್ತುಗಳನ್ನು ಖರೀದಿಸಲು ಸೇರುವುದರಿಂದ ಸೋಂಕು ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಆದ್ದರಿಂದ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದು ಸರ್ಕಾರದ ಆಧ್ಯ ಕರ್ತವ್ಯವಾಗಿದೆ. ಲಸಿಕೆ ಕೊರತೆಯಿಂದಾಗಿ ಜನರು ಲಸಿಕೆ ಪಡೆಯಲು ಪರದಾಡುವಂತಾಗಿದೆ. ಲಸಿಕೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ನೀಡಿರುವುದು ಖಾಸಗಿ ಆಸ್ಪತ್ರೆಗಳಿಗೆ ಲಾಭ ಗಳಿಸಲು ಅವಕಾಶ ಮಾಡಿಕೊಟ್ಟಂತಾಗಿದೆ. ಲಸಿಕೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಪೆಟ್ರೋಲ್ ಮತ್ತು ಡಿಸೇಲ್ ದರ 100 ರೂ. ಗಡಿ ದಾಟುತ್ತಿದೆ. ಇದರಿಂದಾಗಿ ಸರಕು ಸಾಗಾಣಿಕೆಯ ದರ ಹೆಚ್ಚಾಗಿ ದಿನನಿತ್ಯದ ವಸ್ತುಗಳು ಸಹ ಗಗನಕ್ಕೇರುತ್ತಿದೆ ಎಂದ ಅವರು, ಒಂದು ಕಡೆ ರೈತರ ಚಟುವಟಿಕೆಗಳಿಗೆ ಅವಕಾಶ ನೀಡುತ್ತೇವೆ ಎನ್ನುವ ಜಿಲ್ಲಾಡಳಿತ ಮತ್ತೊಂದು ಕಡೆ ರೈತರಿಗೆ ಪೂರಕವಾಗಿ ಬೇಕಾಗಿರುವ ಬೀಜ ಗೊಬ್ಬರದ ಅಂಗಡಿಗಳನ್ನು ತೆರೆಯಲು ನಿರ್ಬಂಧ ವಿಧಿಸಿದೆ. ಹೀಗಾದರೆ ರೈತರು ಹೇಗೆ ತಮ್ಮ ಪರಿಕರಗಳನ್ನು ಕೊಂಡುಕೊಳ್ಳುತ್ತಾರೆ ಎಂದು ಪ್ರಶ್ನೆ ಮಾಡಿದ ಅವರು, ಅಂಗಡಿಗಳನ್ನು ತೆರೆದರೆ ದಂಡ ವಿಧಿಸಲಾಗುತ್ತಿದೆ. ಆದ್ದರಿಂದ ಬೆಳಿಗ್ಗೆ 6 ರಿಂದ 12ರ ವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಮತ್ತೊಂದು ಕಡೆ ಮದುವೆಗೆ ಅನುಮತಿ ನೀಡುತ್ತಾರೆ. ಆದರೆ ಮದುವೆ ಸಂದರ್ಭದಲ್ಲಿ ಬೇಕಾಗುವ ತಾಳಿ, ಬಟ್ಟೆ ಕೊಂಡುಕೊಳ್ಳಲು ಎಲ್ಲಿಗೆ ಹೋಗಬೇಕು. ಬಟ್ಟೆ ಮತ್ತು ಬಂಗಾರದ ಅಂಗಡಿಗಳನ್ನು ಮುಚ್ಚಿದರೆ ಏನು ಮಾಡಬೇಕು ಎಂದ ಅವರು, ಕನಿಷ್ಟ ಪಕ್ಷ ಬಟ್ಟೆ ಮತ್ತು ಬಂಗಾರದ ಅಂಗಡಿಗಳಿಗೆ ಬೆಳಿಗ್ಗೆ ಕನಿಷ್ಠ 1 ಗಂಟೆಗಳ ಕಾಲ ವ್ಯವಹಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಮಂಜುನಾಥ್, ಎಸ್.ಕೆ.ಶ್ಯಾಮಸುಂದರ್, ಆರ್.ಕೆ.ಉಮೇಶ್ ಉಪಸ್ಥಿತರಿದ್ದರು.
ಬಿಎಸ್‌ವೈ ರಾಜೀನಾಮೆ ನಾಟಕ: ಕೊರೋನ ಸೋಂಕನ್ನು ನಿಯಂತ್ರಿಸಲು ವಿಫಲವಾಗಿರುವ ಮತ್ತು ಲಸಿಕೆಯನ್ನು ಉಚಿತವಾಗಿ ನೀಡದೆ ಜನರ ಆಕ್ರೋಶಕ್ಕೆ ಗುರಿಯಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗ ರಾಜೀನಾಮೆ ನಾಟಕವನ್ನು ಆರಂಭಿಸಿದ್ದಾರೆ ಎಂದು ಕೆ.ಬಿ.ಪ್ರಸನ್ನ ಕುಮಾರ್ ವ್ಯಂಗ್ಯವಾಡಿದ್ದಾರೆ.
ಆಪರೇಷನ್ ಕಮಲ ಮಾಡಿ ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ ಅವರು ಕೊರೋನ ನಿಯಂತ್ರಿಸಲು ವಿಫಲವಾಗಿದ್ದು, ಜನರ ದಿಕ್ಕು ಬದಲಾಯಿಸಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತನಾಡಿ ಜನರ ಗಮನ ಬೇರೆ ಕಡೆ ಸೆಳೆದಿದ್ದಾರೆ ಎಂದು ಟೀಕಿಸಿದರು.







