ಮೂಡುಬಿದಿರೆ: ಸೌಹಾರ್ದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಆ್ಯಂಬುಲೆನ್ಸ್ ಸೇವೆ ಪ್ರಾರಂಭ

ಮೂಡುಬಿದಿರೆ, ಜೂ.7: ಸೌಹಾರ್ದ ಚಾರಿಟೇಬಲ್ ಟ್ರಸ್ಟ್ ಮೂಡುಬಿದಿರೆ ಇದರ ಮಹತ್ವಾಕಾಂಕ್ಷಿ ಯೋಜನೆಯಾಗಿ ಮೂಡುಬಿದಿರೆಯ ಬಡಜನತೆಗೆ ಉಚಿತ ಆ್ಯಂಬುಲೆನ್ಸ್ ಸೇವೆಗೆ ಸೋಮವಾರ ಚಾಲನೆ ನೀಡಲಾಯಿತು.
ಶಾಸಕ ಉಮಾನಾಥ ಕೋಟ್ಯಾನ್ ಅವರು ಕನ್ನಡ ಭವನದಲ್ಲಿ ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಅವರು ಕೋವಿಡ್ ಸಂಬಂಧಿತ ಸೋಂಕಿನ ಪೂರ್ವ ಲಕ್ಷಣಗಳಿಗೆ ಆಳ್ವಾಸ್‌ನ ವೈದ್ಯರ ತಂಡದಿಂದ ಉಚಿತ ತಪಾಸಣೆ, ಅಲೋಪತಿ, ಆಯುರ್ವೇದ, ಹೋಮಿಯೋಪತಿ ಇವುಗಳ ಸಾಂದರ್ಭಿಕ ಸಂಯೋಜನೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿ, ಇದೀಗ ಸೌಹಾರ್ದ ಚಾರಿಟೇಬಲ್ ಟ್ರಸ್ಟ್‌ನವರು ಕೋವಿಡ್ ಸಂದರ್ಭದಿಂದ ಮೊದಲ್ಗೊಂಡು ಬಿಪಿಎಲ್ ಜನರಿಗೆ ಉಚಿತವಾಗಿ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಲು ಮುಂದಾಗಿರುವುದು ಶ್ಲಾಘನೀಯ. ಸಮಾಜಕ್ಕೆ ಇದೊಂದು ಮಾದರಿ ಕೊಡುಗೆಯಾಗಿದೆ ಎಂದು ಉಮಾನಾಥ ಕೋಟ್ಯಾನ್ ಹೇಳಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಅವರು ಸೌಹಾರ್ದ ಸಂಘಟನೆಯವರು ಈ ಮೊದಲಿನಿಂದಲೂ ಸಾಮಾಜಿಕ ಕಳಕಳಿಯ ಸೇವೆಯಲ್ಲಿ ತೊಡಗಿಸಿಕೊಂಡಿರುವುದನ್ನು ಸ್ಮರಿಸಿ, ಸುಮಾರು 8.5 ಲಕ್ಷ ರೂ. ವೆಚ್ಚದಲ್ಲಿ ನೂತನ ಆ್ಯಂಬುಲೆನ್ಸ್ ಸೇವಾ ಯೋಜನೆಯನ್ನು ಕಾರ್ಯಗತಗೊಳಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಲಸಿಕೆ ಅಪಪ್ರಚಾರ ಬೇಡ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಉತ್ಪಾದನೆಯಾಗುತ್ತಿರುವ ಕೋವಿಡ್ ಲಸಿಕೆಯಲ್ಲಿ ಅರ್ಧಾಂಶ ಸರಕಾರಿ ಆಸ್ಪತ್ರೆಗಳ ಮೂಲಕ ಉಚಿತವಾಗಿಯೂ ಉಳಿದ ಆರ್ಧಾಂಶ ಖಾಸಗಿ ವೈದ್ಯಕೀಯ ವ್ಯವಸ್ಥೆಗಳ ಮೂಲಕ ನಿಗಧಿತ ಶುಲ್ಕ ವಿಧಿಸಿ ನೀಡುವಂತೆ ಸರಕಾರ ಅವಕಾಶ ಕಲ್ಪಿಸಿದೆ. ಎರಡೂ ವ್ಯವಸ್ಥೆಗಳಲ್ಲಿ ಬಳಸಲಾಗುವ ಲಸಿಕೆಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಸುಮ್ಮನೆ ವದಂತಿಗಳನ್ನು ಹಬ್ಬಿಸಬೇಡಿ, ಎಲ್ಲರೂ ಯಾವುದಾದರೂ ಒಂದು ವ್ಯವಸ್ಥೆಯಲ್ಲಿ ಲಸಿಕೆ ತೆಗೆದುಕೊಳ್ಳುವುದು ಕ್ಷೇಮಕರ ಎಂದು ಹೇಳಿದರು.
ತಹಶೀಲ್ದಾರ್ ಪುಟ್ಟರಾಜು, ಮೂಡುಬಿದಿರೆ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಮುಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಚೌಟರ ಅರಮನೆ ಕುಲದೀಪ ಎಂ., ಪುರಸಭಾ ಸದಸ್ಯರು, ಮುಖ್ಯಾಧಿಕಾರಿ ಇಂದು ಎಂ. ಹಾಗೂ ಸೌಹಾರ್ದ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸೌಹಾರ್ದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಬುಲ್ ಆಲಾ ಪುತ್ತಿಗೆ ಸ್ವಾಗತಿಸಿ, ಈ ಯೋಜನೆಗೆ ವಿಶೇಷ ಸಹಕಾರ ನೀಡಿರುವ ಮತೀನ್ ಅಹ್ಮದ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿ, ಬಡಜನರು ಮಾತ್ರವಲ್ಲ, ಮೂಡುಬಿದಿರೆ ಪೇಟೆಯ ಸುತ್ತ ಮುತ್ತ ನಡೆಯುವ ಅವಘಡಗಳ ಸಂದರ್ಭ ಸಾರ್ವಜನಿಕರು ಈ ಉಚಿತ ಆ್ಯಂಬುಲೆನ್ಸ್ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಸೌಹಾರ್ದದ ಕಾರ್ಯದರ್ಶಿ ಮುಹಮ್ಮದ್ ಶರೀಫ್ ವಂದಿಸಿದರು.










.jpeg)



