29 ಸಾವಿರ ಕನ್ನಡಿಗರನ್ನು ಕೊಂದಿದ್ದೀರಿ, ನಿಮಗೆ ಪ್ರಾಯಶ್ಚಿತ ಇಲ್ಲವೇ: ಸರಕಾರದ ವಿರುದ್ಧ ನಿರ್ದೇಶಕ ಗುರುಪ್ರಸಾದ್ ಕಿಡಿ

ಬೆಂಗಳೂರು, ಜೂ.7: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನರ ಸೇವೆ ಮಾಡುತ್ತಿಲ್ಲ. ಅವರ ಮಗನ ಸೇವೆ ಮಾಡುತ್ತಿದ್ದಾರೆ. 29 ಸಾವಿರ ಮಂದಿ ಕೋವಿಡ್‍ಗೆ ಬಲಿಯಾಗಿದ್ದಾರೆ. ಯಡಿಯೂರಪ್ಪ ಅವರೇ ನಿಮಗೆ ತಪ್ಪಿತಸ್ಥ ಭಾವನೆ ಕಾಡುತ್ತಿಲ್ಲವೇ, ಸತ್ತವರೆಲ್ಲರಿಗೂ ಒಂದೊಂದು ಕೋಟಿ ರೂಪಾಯಿ ಕೊಡಿ. ಅಷ್ಟು ಕನ್ನಡಿಗರನ್ನು ಸಾಯಿಸಿದ್ದೀರಲ್ಲವೇ, ನಿಮಗೆ ಪ್ರಾಯಶ್ಚಿತ ಇಲ್ಲವೇ ಎಂದು ಸಿನೆಮಾ ನಿರ್ದೇಶಕ ಗುರುಪ್ರಸಾದ್ ಪ್ರಶ್ನಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿದ ಅವರು, ನಾವು ಪ್ರಧಾನಿ ನರೇಂದ್ರ ಮೋದಿ ಅವರ ಮುಖ ನೋಡಿಕೊಂಡು ಮತ ಹಾಕಿದ್ದೆವು. ಆದರೆ, ಈಗನ ಪರಿಸ್ಥಿತಿ ಯಾರಿಗೂ ಬೇಡ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಮುಖ ನೋಡಿಕೊಂಡು ಮತ ಹಾಕಿದ್ವಿ, ಇನ್ನುಮುಂದೆ ರಾಜಕಾರಣಿಗಳು ಮತ ಕೇಳಿಕೊಂಡು ಮನೆ ಬಳಿ ಬಂದರೆ ಚಪ್ಪಲಿಯಲ್ಲಿ ಹೊಡಿಯಿರಿ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ ಮಾಡಲು ಅವಕಾಶ ಕೊಡುವುದಿಲ್ಲ. ಆದರೆ, ಬಿಜೆಪಿ ಇವರಿಗೆ (ಯಡಿಯೂರಪ್ಪ) ಹೇಗೆ ರಾಜಿ ಮಾಡಿಕೊಂಡು ಅವಕಾಶ ಕೊಟ್ಟಿದೆ? ಯಾರಾದರೂ ಅಧಿಕಾರ ಮಾಡುತ್ತಿದ್ದರಲ್ಲವೇ. ಇನ್ನು, ಯಡಿಯೂರಪ್ಪ ಅವರು ಹೈಕಮಾಂಡ್ ಅನ್ನುತ್ತಿದ್ದಾರೆ. ನಿಮಗೆ ಕನ್ನಡಿಗರೇ ಹೈಕಮಾಂಡ್. ಆದ್ದರಿಂದ ನೀವು ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ದುಡ್ಡು ಮಾಡಿದ್ದೀರಲ್ಲಾ. ಕೂತ್ಕೊಂಡು ನೆಕ್ಕಿ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಸದ್ಯ ನಮ್ಮ ಜನರಿಗೆ ಬೇಕಾಗಿರುವುದು ಊಟ, ಬಟ್ಟೆ ಮತ್ತು ಆರೋಗ್ಯ. ಅದೆಲ್ಲಾ ಬಿಟ್ಟು ಚಂದ್ರನಿಂದ ಥೋರಿಯಂ ತರಿಸುತ್ತೇನೆ ಎಂದು ಹೇಳಿ, ಸಾವಿರಾರು ಕೋಟಿಯನ್ನು ಮಣ್ಣಿಗೆ ಹಾಕಿಬಿಟ್ಟಿರಲ್ಲಾ. ಇದು ಸರಿಯೇ ಎಂದು ಪ್ರಧಾನಿಯನ್ನು ಅವರು ಪ್ರಶ್ನಿಸಿದರು.
ಆರ್.ಅಶೋಕ್, ಸಿ.ಟಿ.ರವಿ ನೀವೆಲ್ಲಾ ಏನು ಮಾಡಿದ್ದೀರಿ. 29 ಸಾವಿರ ಕನ್ನಡಿಗರು ಸತ್ತಿದ್ದಾರಲ್ಲಾ ಅವರಿಗೆ ನಿಮ್ಮೆಲ್ಲಾ ಆಸ್ತಿ ಬರೆದುಕೊಡಿ. ನಿಮ್ಮಂಥ ಸಂಸ್ಕಾರಹೀನ ರಾಜಕಾರಣಿಗಳ ಯುಗ ಮುಗಿಯುತ್ತಿದೆ. ಅದಕ್ಕೆ ಇಂದು ಬೀಜ ಹಾಕುತ್ತಿದ್ದೇನೆ. ಇನ್ನು ಮುಂದೆ ಒಳ್ಳೆಯ ಕಾಲ ಬರಲಿದೆ ಎಂದು ಗುರು ಪ್ರಸಾದ್ ಆಕ್ರೋಶ ಹೊರಹಾಕಿದರು.







