ವಿವಾದಾತ್ಮಕ ನಿಯಮ ವಿರೋಧಿಸಿ ಲಕ್ಷದ್ವೀಪ ಜನತೆಯ ಉಪವಾಸ ಸತ್ಯಾಗ್ರಹ

ತಿರುವನಂತಪುರಂ, ಜೂ.7: ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಯೋಜಿಸಿರುವ ವಿವಾದಾತ್ಮಕ ಹೊಸ ನಿಯಮಗಳನ್ನು ವಿರೋಧಿಸಿ ಲಕ್ಷದ್ವೀಪದ ಜನತೆ ಸೋಮವಾರ 12 ಗಂಟೆ ಅವಧಿಯ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ ಎಂದು ವರದಿಯಾಗಿದೆ.
ಮನೆಯಲ್ಲೇ ಮಾಸ್ಕ್ ಧರಿಸಿ ಪ್ರತಿಭಟನೆ ನಡೆಸಿದ ಜನರು ಫಲಕ ಪ್ರದರ್ಶಿಸಿ ಆಡಳಿತಾಧಿಕಾರಿಯ ಕ್ರಮಗಳನ್ನು ವಿರೋಧಿಸಿ ಘೋಷಣೆ ಕೂಗಿದರು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಚರಿಸುವ ಮೂಲಕ ಲಕ್ಷದ್ವೀಪದ ಇತಿಹಾಸದಲ್ಲೇ ಪ್ರಪ್ರಥಮ ಬೃಹತ್ ಪ್ರತಿಭಟನೆಗೆ ಬೆಂಬಲ ಸೂಚಿಸಿದವು.
ಮೀನುಗಾರರು ಕಡಲಿಗಿಳಿಯಲಿಲ್ಲ. ಹಡಗು ಇಲಾಖೆಯ ಸಿಬ್ಬಂದಿಗಳೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ಶಾಸನ(ಎಲ್ಡಿಎಆರ್)ವನ್ನು ರದ್ದುಗೊಳಿಸಬೇಕು ಮತ್ತು ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ರನ್ನು ವಾಪಾಸು ಕರೆಸಿಕೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಲ್ಲಿ ಸೇರಿದೆ.
ಲಕ್ಷದ್ವೀಪದಲ್ಲಿ ಜಮೀನು ಸ್ವಾಧೀನ ಮತ್ತು ಬಳಕೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಮೂಲಕ ದ್ವೀಪದಲ್ಲಿರುವ ನಗರಗಳ ಅಭಿವೃದ್ಧಿಯ ಬಗ್ಗೆ ಗಮನ ನೀಡುವ ಪ್ರಮುಖ ಉದ್ದೇಶವನ್ನು ಎಲ್ಡಿಎಆರ್ ಹೊಂದಿದೆ.
ಜೊತೆಗೆ, ಲಕ್ಷದ್ವೀಪ ಸಮಾಜ ವಿರೋಧಿ ಕೃತ್ಯ ತಡೆ ಕಾಯ್ದೆಯ ಬಗ್ಗೆಯೂ ಜನರ ವಿರೋಧವಿದೆ. ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕೃತ್ಯದಲ್ಲಿ ತೊಡಗುವ ವ್ಯಕ್ತಿಯನ್ನು 1 ವರ್ಷದವರೆಗೆ ಬಂಧನದಲ್ಲಿಡಲು ಈ ಕಾಯ್ದೆ ಅಧಿಕಾರ ನೀಡುತ್ತದೆ.
ಮನೆ, ಬೀಚ್, ನೀರಿನಡಿ ಪ್ರತಿಭಟನೆ
ಲಕ್ಷದ್ವೀಪದಲ್ಲಿ ಜಾರಿಗೆ ತರಲು ರೂಪಿಸಲಾಗಿರುವ ಹೊಸ ನಿಯಮಗಳನ್ನು ವಿರೋಧಿಸಿ ಹಮ್ಮಿಕೊಂಡಿದ್ದ 12 ಗಂಟೆಗಳ ಉಪವಾಸ ಸತ್ಯಾಗ್ರಹದ ಸಂದರ್ಭ ಮನೆಯಲ್ಲಿ, ಬೀಚ್ಗಳಲ್ಲಿ ಹಾಗೂ ನೀರಿನಡಿಯೂ ಜನತೆ ಪ್ರತಿಭಟನೆ ನಡೆಸಿದ್ದು ವಿಶೇಷವಾಗಿತ್ತು.
ಲಕ್ಷದ್ವೀಪವನ್ನು ಮಾಲ್ದೀವ್ಸ್ ನಂತೆ ಪ್ರವಾಸಿಗರ ಆಕರ್ಷಣೆಯ ತಾಣವನ್ನಾಗಿ ರೂಪಿಸುವ ಉದ್ದೇಶದ್ದು ಎಂದು ಅಲ್ಲಿಯ ಆಡಳಿತಾಧಿಕಾರಿ ಪಟೇಲ್ ಹೇಳಿರುವ ಶಾಸನವನ್ನು ವಿರೋಧಿಸಿ ಮನೆಯಲ್ಲಿ, ಅಂಗಡಿಗಳಲ್ಲಿ ಪ್ರತಿಭಟನೆ ನಡೆಸಲಾಯಿತು.
ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ಶಾಸನ(ಎಲ್ಡಿಎಆರ್)ವನ್ನು ರದ್ದುಗೊಳಿಸಬೇಕು ಮತ್ತು ಆಡಳಿತಾಧಿಕಾರಿ ಪ್ರಫುಲ್ ಪಟೇಲ್ರನ್ನು ವಾಪಾಸು ಕರೆಸಿಕೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಲ್ಲಿ ಸೇರಿದೆ. ಲಕ್ಷದ್ವೀಪದಲ್ಲಿ ಜಮೀನು ಸ್ವಾಧೀನ ಮತ್ತು ಬಳಕೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಮೂಲಕ ದ್ವೀಪದಲ್ಲಿರುವ ನಗರಗಳ ಅಭಿವೃದ್ಧಿಯ ಬಗ್ಗೆ ಗಮನ ನೀಡುವ ಪ್ರಮುಖ ಉದ್ದೇಶವನ್ನು ಎಲ್ಡಿಎಆರ್ ಹೊಂದಿದೆ.ಆದರೆ ಈ ಶಾಸನವು ಲಕ್ಷದ್ವೀಪದ ವಿಶಿಷ್ಟ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ನಾಶಗೊಳಿಸುವ ಜತೆಗೆ, ಭೂಸ್ವಾಧೀನ ಮಾಡಿಕೊಳ್ಳಲು ಆಡಳಿತಕ್ಕೆ ಸ್ವಾತಂತ್ರ್ಯ ಮತ್ತು ಅಧಿಕಾರ ಒದಗಿಸಲಿದೆ ಎಂದು ಜನತೆ ವಿರೋಧಿಸಿದ್ದಾರೆ.
ಜೊತೆಗೆ, ಜಾನುವಾರುಗಳ ಹತ್ಯೆ ಮತ್ತು ಬಳಕೆ ನಿಷೇಧಿಸುವ, ಗೋವಿನ ಸಾಗಣೆ ಅಥವಾ ಮಾರಾಟವನ್ನು ನಿಷೇಧಿಸುವ ಪ್ರಸ್ತಾವನೆಗೂ ಜನತೆಯ ವಿರೋಧವಿದೆ. ಇದು ತಮ್ಮ ಆಹಾರದ ಪದ್ಧತಿಯನ್ನು ಗುರಿಯಾಗಿಸಿಕೊಂಡಿರುವ ಪ್ರಸ್ತಾವನೆ ಎಂಬುದು ಮುಸ್ಲಿಮರು ಬಹುಸಂಖ್ಯೆಯಲ್ಲಿರುವ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಜೊತೆಗೆ, ಲಕ್ಷದ್ವೀಪ ಸಮಾಜ ವಿರೋಧಿ ಕೃತ್ಯ ತಡೆ ಕಾಯ್ದೆಯ ಬಗ್ಗೆಯೂ ಜನರ ವಿರೋಧವಿದೆ. ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕೃತ್ಯದಲ್ಲಿ ತೊಡಗುವ ವ್ಯಕ್ತಿಯನ್ನು 1 ವರ್ಷದವರೆಗೆ ಬಂಧನದಲ್ಲಿಡಲು ಈ ಕಾಯ್ದೆ ಅಧಿಕಾರ ನೀಡುತ್ತದೆ. ಲಕ್ಷದ್ವೀಪ ಪಂಚಾಯತ್ ಕಾನೂನಿನ ಪ್ರಕಾರ, ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದವರು ಗ್ರಾಮಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.
ಕಾನೂನಿನಲ್ಲಿ ಬದಲಾವಣೆ ತರುವ ಪ್ರಸ್ತಾವನೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಹಲವು ಪಕ್ಷಗಳು ಬೆಂಬಲ ಸೂಚಿಸಿವೆ. ಬದಲಾವಣೆ ವಿರೋಧಿಸಿ ಹಲವು ಸಂಸದರು, ಅಧಿಕಾರಿಗಳು ಹಾಗೂ ಪ್ರಮುಖರು ಧ್ವನಿ ಎತ್ತಿದ್ದಾರೆ.ಆಡಳಿತಾಧಿಕಾರಿಯನ್ನು ವಾಪಾಸು ಕರೆಸಿಕೊಳ್ಳಬೇಕು ಎಂದು ಆಗ್ರಹಿಸುವ ನಿರ್ಣಯವನ್ನು ಕೇರಳ ವಿಧಾನಸಭೆ ಅನುಮೋದಿಸಿದೆ.
ಕರಡು ಶಾಸನವು ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅನುಮೋದನೆಯನ್ನು ಎದುರು ನೋಡುತ್ತಿದೆ. ಲಕ್ಷದ್ವೀಪದ ಜನತೆಯ ಆಶಯಕ್ಕೆ ವಿರುದ್ಧವಾಗಿರುವ ಯಾವುದೇ ಕಾನೂನನ್ನು ಜಾರಿಗೊಳಿಸುವುದಿಲ್ಲ ಎಂದು ಅಮಿತ್ ಶಾ ಭರವಸೆ ನೀಡಿರುವುದಾಗಿ ಲಕ್ಷದ್ವೀಪ ಸಂಸದ ಮುಹಮ್ಮದ್ ಫೈಝಲ್ ಕಳೆದ ವಾರ ಹೇಳಿದ್ದರು. ರವಿವಾರ 93 ನಿವೃತ್ತ ಅಧಿಕಾರಿಗಳು ಆಡಳಿತಾಧಿಕಾರಿ ಪಟೇಲ್ ಅವರ ಪಕ್ಷಪಾತಿ ವರ್ತನೆಯನ್ನು ಖಂಡಿಸಿ ಮತ್ತು ಅವರ ನಿರ್ಧಾರ ಶಾಂತಿಯನ್ನು ಕದಡುವ ಸಾಧ್ಯತೆಯಿದೆ ಎಂದು ಉಲ್ಲೇಖಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.







