ಸತತ ಎರಡನೇ ದಿನವೂ ಏರಿಕೆ: ಹೊಸ ಎತ್ತರಕ್ಕೆ ಇಂಧನ ಬೆಲೆಗಳು

ಹೊಸದಿಲ್ಲಿ,ಜೂ.7: ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸತತ ಎರಡನೇ ದಿನವಾದ ಸೋಮವಾರವೂ ದೇಶಾದ್ಯಂತ ಇಂಧನ ಬೆಲೆಗಳನ್ನು ಹೆಚ್ಚಿಸಿವೆ. ದಿಲ್ಲಿಯಲ್ಲಿ ಪ್ರತಿ ಲೀ.ಪೆಟ್ರೋಲ್ 28 ಪೈಸೆ ದುಬಾರಿಯಾಗಿದ್ದು 95.31 ರೂ.ಗೆ ಮತ್ತು ಡೀಸೆಲ್ 27 ಪೈಸೆ ಏರಿಕೆಯೊಂದಿಗೆ 86.22 ರೂ.ಗೆ ತಲುಪಿವೆ.
ಮುಂಬೈನಲ್ಲಿ ಮೇ 29ರಂದು ಮೊದಲ ಬಾರಿಗೆ ಪ್ರತಿ ಲೀ.ಗೆ 100 ರೂ.ದಾಟಿದ್ದ ಪೆಟ್ರೋಲ್ ಬೆಲೆ ಸೋಮವಾರ 101.53 ರೂ.ಗಳ ಹೊಸ ಎತ್ತರವನ್ನು ತಲುಪಿದ್ದು,ಡೀಸೆಲ್ ಬೆಲೆ ಕೂಡ ಪ್ರತಿ ಲೀ.ಗೆ 93.57 ರೂ.ಗೇರಿದೆ. ಇದರೊಂದಿಗೆ ದೇಶದ ಮಹಾನಗರಗಳ ಪೈಕಿ ಮುಂಬೈನಲ್ಲಿ ಡೀಸೆಲ್ ಅತ್ಯಂತ ದುಬಾರಿಯಾಗಿದೆ.
ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 24ರಿಂದ 28 ಪೈಸೆಗಳಷ್ಟು ದುಬಾರಿಯಾಗಿದ್ದು, ವಿವಿಧ ರಾಜ್ಯಗಳಲ್ಲಿ ಏರಿಕೆಯು ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿದೆ.
ಮುಂಬೈನ ನೆರೆಯ ಥಾಣೆಯಲ್ಲಿ ಕೆಲವು ದಿನಗಳ ಹಿಂದೆಯೇ ಪೆಟ್ರೋಲ್ ಪ್ರತಿ ಲೀ.ಗೆ ನೂರರ ಗಡಿಯನ್ನು ದಾಟಿದೆ. ಇಂಧನಗಳ ಮೇಲೆ ದೇಶದಲ್ಲಿಯೇ ಅತ್ಯಂತ ಹೆಚ್ಚಿನ ವ್ಯಾಟ್ ವಿಧಿಸುತ್ತಿರುವ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳ ಇತರ ಕೆಲವು ನಗರಗಳಲ್ಲಿಯೂ ಹಲವಾರು ದಿನಗಳಿಂದ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ ನೂರರ ಮೇಲೆಯೇ ಇದೆ.
ರಾಜಸ್ಥಾನದ ಶ್ರೀಗಂಗಾ ನಗರದಲ್ಲಿ ಪ್ರತಿ ಲೀ.ಪೆಟ್ರೋಲ್ ಬೆಲೆ ಸೋಮವಾರ 106.29 ರೂ.ಗಳಿದ್ದರೆ ಡೀಸೆಲ್ ಬೆಲೆ ನೂರರ ಗಡಿಯನ್ನು ಸಮೀಪಿಸಿದ್ದು,99.23 ರೂ.ಆಗಿದೆ. ರಾಜಸ್ಥಾನದಲ್ಲಿ ಅಧಿಕ ವ್ಯಾಟ್ ನಿಂದಾಗಿ ಇಂಧನ ಬೆಲೆಗಳೂ ಹೆಚ್ಚೇ ಇರುತ್ತವೆ. ಭಾರತ-ಪಾಕಿಸ್ತಾನ ಗಡಿಗೆ ಸಮೀಪದಲ್ಲಿರುವ ಪುಟ್ಟ ಪಟ್ಟಣ ಶ್ರೀಗಂಗಾ ನಗರಕ್ಕೆ ಸಾಗಾಣಿಕೆ ವೆಚ್ಚವು ಅಧಿವಾಗಿರುವುದರಿಂದ ಇಲ್ಲಿಯ ಬಂಕ್ ಗಳಲ್ಲಿ ಇಂಧನ ಬೆಲೆಗಳು ದೇಶದಲ್ಲಿಯೇ ಅತ್ಯಂತ ದುಬಾರಿಯಾಗಿವೆ.
ಈ ವರ್ಷದ ಜನವರಿ ಮತ್ತು ಫೆಬ್ರವರಿಯಲ್ಲಿ ಚಿಲ್ಲರೆ ಮಾರಾಟ ದರಗಳ ಏರಿಕೆಯೊಂದಿಗೆ ದೇಶದ ಹಲವಾರು ಭಾಗಗಳಲ್ಲಿ ಪ್ರೀಮಿಯಂ ಪೆಟ್ರೋಲ್ ಬೆಲೆ ಈಗಾಗಲೇ 100 ರೂ.ಗಳ ಗಡಿಯನ್ನು ದಾಟಿದೆ.
ಸೋಮವಾರದ ಬೆಲೆ ಏರಿಕೆಯೊಂದಿಗೆ ಮೇ 1ರಿಂದ 20 ಸಲ ಇಂಧನಗಳ ಬೆಲೆಗಳನ್ನು ಹೆಚ್ಚಿಸಲಾಗಿದ್ದರೆ,18 ದಿನಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈ ಅವಧಿಯಲ್ಲಿ ದಿಲ್ಲಿಯಲ್ಲಿ ಪ್ರತಿ ಲೀ.ಪೆಟ್ರೋಲ್ ಬೆಲೆಯಲ್ಲಿ 4.91 ರೂ.ಮತ್ತು ಡೀಸೆಲ್ ಬೆಲೆಯಲ್ಲಿ 5.50 ರೂ.ಗಳ ಒಟ್ಟು ಏರಿಕೆಯಾಗಿದೆ.







