ಹೊಸ ಐಟಿ ನಿಯಮಗಳನ್ನು ಅನುಸರಿಸಲು ಸರಕಾರದಿಂದ ಹೆಚ್ಚಿನ ಸಮಯ ಕೋರಿದ ಟ್ವಿಟರ್

ಹೊಸದಿಲ್ಲಿ: ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಟ್ವಿಟರ್ ಭಾರತದಲ್ಲಿ ಜಾರಿಗೆ ತಂದಿರುವ ಹೊಸ ಐಟಿ ನಿಯಮಗಳನ್ನು ಪಾಲಿಸಲು ಹೆಚ್ಚಿನ ಸಮಯವನ್ನು ಕೋರಿ ಕೇಂದ್ರ ಸರಕಾರವನ್ನು ಸಂಪರ್ಕಿಸಿದೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ, ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟರ್ ನಿಯಮ ಗಳನ್ನು ಪಾಲಿಸಲು ಉದ್ದೇಶಿಸಿದೆ. ಆದರೆ ಭಾರತದಲ್ಲಿನ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಹೇಳಿದೆ.
ಐಟಿ ನಿಯಮಗಳನ್ನು ಅನುಸರಿಸಲು ಹೆಚ್ಚಿನ ಸಮಯವನ್ನು ಕೋರಿ ಟ್ವಿಟರ್ ಮೈಟಿಗೆ ಪತ್ರ ಬರೆದಿದೆ. ಟ್ವಿಟರ್ ನಿಯಮಗಳನ್ನು ಪಾಲಿಸುವ ಉದ್ದೇಶವನ್ನು ವ್ಯಕ್ತಪಡಿಸಿದೆ. ಆದರೆ ಭಾರತದಲ್ಲಿ ಸಾಂಕ್ರಾಮಿಕ ರೋಗ ಕಾಡುತ್ತಿರುವುದರಿಂದ ಅದನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ.
ಕಳೆದ ವಾರ ಕೇಂದ್ರ ಸರಕಾರವು ಹೊಸ ನಿಯಮಗಳನ್ನು ಪಾಲಿಸದಿರುವ ಬಗ್ಗೆ ಟ್ವಿಟರ್ ಕಂಪನಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿತ್ತು. ಸರಕಾರದ ಎಚ್ಚರಿಕೆಗೆ ಟ್ವಿಟರ್‌ನಿಂದ ಪ್ರತಿಕ್ರಿಯೆ ಬಂದಿದೆ.
"ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಟ್ವಿಟರ್ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ನಾವು ಭಾರತ ಸರಕಾರಕ್ಕೆ ಭರವಸೆ ನೀಡಿದ್ದೇವೆ. ನಾವು ಭಾರತ ಸರಕಾರದೊಂದಿಗೆ ನಮ್ಮ ರಚನಾತ್ಮಕ ಸಂವಾದವನ್ನು ಮುಂದುವರಿಸುತ್ತೇವೆ" ಎಂದು ಟ್ವಿಟರ್ ವಕ್ತಾರರೊಬ್ಬರು ತಿಳಿಸಿದ್ದಾರೆ.