ವಿಜಯೇಂದ್ರ ದೆಹಲಿ ಭೇಟಿಗೆ ರಾಜಕೀಯ ಕಾರಣಗಳಿಲ್ಲ: ಬಿ.ವೈ.ರಾಘವೇಂದ್ರ
ಕುಂದಾಪುರ, ಜೂ.7: ವಿಜಯೇಂದ್ರ ಅವರನ್ನು ಉಪಮುಖ್ಯಮಂತ್ರಿ ಮಾಡುತ್ತಾರೆ, ಅಧ್ಯಕ್ಷರನ್ನಾಗಿ ಮಾಡುತ್ತಾರೆ ಎಂಬುದು ಸುಳ್ಳು ಸುದ್ದಿ. ವೈಯಕ್ತಿಕ ಕೆಲಸಗಳಿಗಾಗಿ ಬಿ.ವೈ.ವಿಜಯೇಂದ್ರ ದೆಹಲಿಗೆ ಹೋಗಿದ್ದ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾದ್ಯಕ್ಷರ ನೆಲೆಯಲ್ಲಿ ಪಕ್ಷದ ಹಿರಿಯರನ್ನು ಭೇಟಿಯಾಗಿದ್ದಾರೆಯೇ ಹೊರತು ಇದಕ್ಕೆ ರಾಜಕೀಯ ಕಾರಣಗಳು ಇಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಸ್ವಷ್ಟಪಡಿಸಿದ್ದಾರೆ.
ಹೆಮ್ಮಾಡಿಯಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಂದೂರು ಕ್ಷೇತ್ರಕ್ಕೆ ಮಂಜೂರಾಗಿರುವ 396ಕೋಟಿ ರೂ. ವೆಚ್ಚದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಆಗಿ ಕಾಮಗಾರಿ ಪ್ರಾರಂಭವಾಗಲಿದೆ. ಇನ್ನೂ 2ವರ್ಷದಲ್ಲಿ ಜನರಿಗೆ ನೀರು ದೊರಕುವ ವಿಶ್ವಾಸ ಇದೆ ಎಂದರು.
ಬ್ಲ್ಯಾಕ್ ಫಂಗಸ್ ಚಿಕಿತ್ಸೆಯ ವೆಚ್ಚವನ್ನು ರಾಜ್ಯ ಸರಕಾರವೇ ವಹಿಸಿಕೊಂಡಿದೆ. ಕೋವಿಡ್ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ಸ್ಪಂದಿಸುವ ಕೆಲಸ ಸರಕಾರದಿಂದ ಆಗುತ್ತಿದೆ. ಬೈಂದೂರು-ಕೊಲ್ಲೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯ ಘಾಟಿ ಪ್ರದೇಶಕ್ಕೆ ಪರ್ಯಾಯ ರಸ್ತೆ ನಿರ್ಮಾಣಕ್ಕಾಗಿ ಹಾಗೂ ಬಾಳೆಬರೆ ಘಾಟಿ ರಸ್ತೆ ಅಭಿವೃದ್ಧಿಗಾಗಿ ಅನುದಾನವನ್ನು ಜೋಡಣೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ ಕುಮಾರ ಶೆಟ್ಟಿ, ಪಕ್ಷದ ಪ್ರಮುಖ ರಾದ ಶಂಕರ ಪೂಜಾರಿ ಯಡ್ತರೆ, ಸುರೇಶ್ ಬಟ್ವಾಡಿ ಉಪಸ್ಥಿತರಿದ್ದರು.







