ಉಡುಪಿ: ವೃದ್ಧೆಯ ಕಣ್ಣಿನಲ್ಲಿ 9 ಸೆಂ.ಮೀ. ಉದ್ದದ ಜೀವಂತ ಹುಳ ಪತ್ತೆ !

ಉಡುಪಿ, ಜೂ.7: ಕಣ್ಣು ನೋವಿನಿಂದ ಬಳಲುತ್ತಿದ್ದ 70 ವರ್ಷ ವಯಸ್ಸಿನ ಮಹಿಳೆಯ ಕಣ್ಣಿನಲ್ಲಿ ಸುಮಾರು 9 ಸೆಂ.ಮೀ. ಉದ್ದದ ಜೀವಂತ ಹುಳ ಪತ್ತೆಯಾಗಿದ್ದು, ಇದನ್ನು ಉಡುಪಿಯ ಪ್ರಸಾದ್ ನೇತ್ರಾಲಯದ ವೈದ್ಯರ ತಂಡ ಯಶಸ್ವಿಯಾಗಿ ಹೊರತೆಗೆದಿದೆ.
ವಿಪರೀತ ಎಡಕಣ್ಣು ನೋವಿನಿಂದ ಬಳಲುತ್ತಿದ್ದ ಮಹಿಳೆ ಜೂ.1ರಂದು ಪ್ರಸಾದ ನೇತ್ರಾಲಯಕ್ಕೆ ಆಗಮಿಸಿದ್ದು, ತುರ್ತಾಗಿ ಪರೀಕ್ಷಿಸಿದ ಡಾ.ಕೃಷ್ಣ ಪ್ರಸಾದ್, ಜೀವಂತ ಹುಳು ಅಕ್ಷಿಪಟಲದ ಸುತ್ತು ತಿರುಗುತ್ತಿರುವುದನ್ನು ಗಮನಿಸಿದರು. ಹುಳವನ್ನು ತಕ್ಷಣ ನಿಷ್ಕ್ರೀಯಗೊಳಿಸಲು ಔಷಧಿ ನೀಡಲಾಯಿತು. ಇದರ ಪರಿಣಾಮ ಹುಳು ಕಾಣದಂತೆ ಆಗಿ ಕಣ್ಣು ನೋವು ಮಾಯಾವಾಯಿತು.
ಮನೆಗೆ ತೆರಳಿದ ವೃದ್ಧೆಗೆ ಜೂ.6ರಂದು ಸಂಜೆ ಬಲಗಣ್ಣಿನಲ್ಲಿ ಮತ್ತೆ ನೋವು ಕಾಣಿಸಿಕೊಂಡಿತು. ಮತ್ತೆ ನೇತ್ರಾಲಯಕ್ಕೆ ಆಗಮಿಸಿದ ವೃದ್ಧೆಯನ್ನು ಡಾ.ಕೃಷ್ಣ ಪ್ರಸಾದ್ ಹೊರ ರೋಗಿಗಳ ವಿಭಾಗದಲ್ಲಿಯೇ ತುರ್ತು ಚಿಕಿತ್ಸೆ ಒಳಪಡಿಸಿ, ಸುಮಾರು 9 ಸೆಂ.ಮೀ. ಉದ್ದರ ಜೀವಂತ ಹುಳುವನ್ನು ಯಶಸ್ವಿಯಾಗಿ ಹೊರ ತೆಗೆಯಲಾಯಿತು.
ಈ ಹುಳು ನೇತ್ರದ ಹೊರ ಪದರದಿಂದ ಹೊರತೆಗೆದ ಪ್ರಥಮ ಹುಳುವಾಗಿದೆ. ಈ ಹುಳದ ಕುರಿತು ಮತ್ತಷ್ಟು ಅಧ್ಯಯನ ನಡೆಸಲು ಪ್ರಾಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಮಾಹಿತಿ ಬರಬೇಕಾಗಿದೆ ಎಂದು ಡಾ.ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.







