ಡಾ. ಶ್ರೀನಿವಾಸ ಕಕ್ಕಿಲ್ಲಾಯ ನೀಡಿದ ದೂರಿನ ತನಿಖೆಗೆ ಮನವಿ

ಮಂಗಳೂರು, ಜೂ.7: ನಗರದ ಜಿಮ್ಮೀಸ್ ಮಾರ್ಕೆಟ್‌ನ ಮಾಲಕ ಮತ್ತು ವ್ಯಕ್ತಿಯೊಬ್ಬರ ವಿರುದ್ಧ ಡಾ.ಶ್ರೀನಿವಾಸ ಕಕ್ಕಿಲ್ಲಾಯ ನೀಡಿದ ದೂರಿನ ಬಗ್ಗೆ ಶೀಘ್ರ ತನಿಖೆ ನಡೆಸಬೇಕು ಎಂದು ಸಿಪಿಐ ಮತ್ತು ಸಿಪಿಎಂ ದ.ಕ.ಜಿಲ್ಲಾ ಸಮಿತಿ ಮತ್ತು ವಿವಿಧ ಸಂಘಟನೆ ಗಳು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಮಂಗಳೂರಿನ ಖ್ಯಾತ ವೈದ್ಯ ಡಾ.ಬಿ. ಶ್ರೀನಿವಾಸ ಕಕ್ಕಿಲ್ಲಾಯ ಮತ್ತು ಜಿಮ್ಮೀಸ್ ಮಾರ್ಕೆಟ್‌ನ ಸಿಬ್ಬಂದಿ ಮಧ್ಯೆ ನಡೆಯಿತೆನ್ನ ಲಾದ ಮಾತುಕತೆಗಳ ರಹಸ್ಯ ಸಿಸಿ ಟಿವಿ ದೃಶ್ಯವನ್ನು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಮಾರ್ಕೆಟ್‌ನ ಮಾಲಕರ ಮತ್ತು ಇನ್ನೊಬ್ಬರ ವಿರುದ್ಧ ಕದ್ರಿ ಠಾಣೆಗೆ ಮೇ 22ರಂದು ದೂರು ನೀಡಲಾಗಿದೆ. ಆದರೆ ಈವರೆಗೂ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ, ಸಿಪಿಎಂ ಪಕ್ಷವಲ್ಲದೆ ಎಐಟಿಯುಸಿ, ಸಿಐಟಿಯು, ಎಐವೈಎಫ್, ಡಿವೈಎಫ್‌ಐ ಮತ್ತಿತರ ಸಂಘಟನೆಗಳ ಪ್ರತಿನಿಧಿಗಳು ಸೋಮವಾರ ಮನವಿ ಸಲ್ಲಿಸಿದರು.
ಸಿಪಿಐ ಮುಖಂಡ ವಿ.ಕುಕ್ಯಾನ್, ಸಾಮಾಜಿಕ ಕಾರ್ಯಕರ್ತ ನಾಗೇಶ ಕಲ್ಲೂರ್, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ಎಐಟಿಯುಸಿ ಮುಖಂಡ ಎಚ್.ವಿ.ರಾವ್, ಸಿಐಟಿಯು ಮುಖಂಡ ಸುನೀಲ್‌ಕುಮಾರ್ ಬಜಾಲ್, ಎಐವೈಎಫ್ ಮುಖಂಡ ಜಗತ್ ಪಾಲ್, ಡಿವೈಎಫ್‌ಐ ಮುಖಂಡ ಸಂತೋಷ್ ಕುಮಾರ್ ಬಜಾಲ್ ನಿಯೋಗದಲ್ಲಿದ್ದರು.





