ಲಸಿಕೆ ವಿತರಣೆಗೆ ಕೇಂದ್ರೀಕೃತ ವ್ಯವಸ್ಥೆ: ಪ್ರಧಾನಿ ಘೋಷಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ವಾಗತ

ಬೆಂಗಳೂರು, ಜೂ. 7: ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಇಂದು ಮಾತನಾಡಿದ ಸಂದರ್ಭದಲ್ಲಿ ಜೂನ್ 21ರಿಂದ ಕೋವಿಡ್-19 ಲಸಿಕೆ ಉಚಿತವಾಗಿ ಕೇಂದ್ರೀಕೃತ ವಿತರಣೆಯನ್ನು ಮತ್ತೆ ಆರಂಭಿಸುವುದಾಗಿ ನೀಡಿರುವ ಹೇಳಿಕೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ವಾಗತಿಸಿದ್ದಾರೆ.
ಕೇಂದ್ರ ಸರಕಾರವು ದೇಶದಲ್ಲಿ ಉತ್ಪಾದನೆಯಾಗುವ ಶೇ.75ರಷ್ಟು ಲಸಿಕೆಯನ್ನು ವಿತರಿಸುವುದರಿಂದ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲು ಸೇವಾ ಶುಲ್ಕ 150 ರೂ.ಗಳಿಗೆ ನಿಗದಿ ಪಡಿಸಿರುವುದರಿಂದ ಲಸಿಕೆ ಅಭಿಯಾನ ಇನ್ನಷ್ಟು ಸುಗಮವಾಗಿ ಮುಂದುವರಿಯಲಿದೆ. ಈ ಕ್ರಮದಿಂದ ಲಸಿಕೆ ಅಭಿಯಾನವನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಾಗುವುದು ಹಾಗೂ ಕೋವಿಡ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಇದೊಂದು ಮಹತ್ವಪೂರ್ಣ ಹೆಜ್ಜೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟಿದ್ದಾರೆ.
ಇದರೊಂದಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಉಚಿತ ಪಡಿತರ ವಿತರಣೆಯನ್ನು ದೀಪಾವಳಿ ಹಬ್ಬದ ವರೆಗೆ ವಿಸ್ತರಿಸಿರುವುದನ್ನು ಶ್ಲಾಘಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಈ ಕ್ರಮವು ಕೋವಿಡ್-19ರ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡವರನ್ನು ಹಸಿವಿನ ದವಡೆಯಿಂದ ಪಾರುಮಾಡಲಿದೆ ಎಂದು ಪ್ರಕಟಣೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.





