‘ಪುಟ ಮೀರದ ಕಥೆ’ ಪುಟ್ಟ ಕಥೆಗಳ ಸಮ್ಮೇಳನ ಸಂಪನ್ನ
ಮಂಗಳೂರು, ಜೂ.7: ಈ ಹೊತ್ತಿನಲ್ಲಿ ಜನರ ನಿತ್ಯ ಬದುಕು ಅಸಹನೀಯ. ಕೋವಿಡ್ ಸಂಕಟದ ಸುದೀರ್ಘ ಕಾಲಮಾನದ ಹಿನ್ನೆಲೆಯಲ್ಲೂ ಕತೆಗಳು ಬಂದವು. ಒಂದು ಘಟನೆ ನಡೆದುದನ್ನು ನಡೆದಂತೆ, ಇದ್ದುದನ್ನು ಇದ್ದಂತೆ ಬರೆದರೆ ಅದು ಮಾಹಿತಿ ಅಥವಾ ವರದಿ ಆಗಬಹುದು, ಯಶಸ್ವಿ ಕತೆ ಆಗಬೇಕಾದ್ರೆ ಅಲ್ಲಿ ಕಥಾಂಶ-ಕಲಾತ್ಮಕತೆ, ನಿರೂಪಣೆ ಭಾಷೆ, ತಿರುವು, ಮೊನಚು, ಕಲ್ಪನೆ ಬೆರೆತಿರಬೇಕು. ತಂತಾನೆ ಸಂದೇಶ ಕೊಡಲು ಸಾಧ್ಯವಾದರೆ ಅಲ್ಲಿ ಮತ್ತೊಂದು ಯಶಸ್ಸು ಸಾಧ್ಯವಿದೆ ಎಂದು ಮಂಗಳೂರು ಆಕಾಶವಾಣಿಯ ನಿವೃತ್ತ ಉದ್ಘೋಷಕ ಮುದ್ದು ಮೂಡುಬೆಳ್ಳೆ ಅಭಿಪ್ರಾಯಪಟ್ಟರು.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಇತ್ತೀಚೆಗೆ ಗೂಗಲ್ ಮೀಟ್ ವರ್ಚುವಲ್ ವೇದಿಕೆಯಲ್ಲಿ ನಡೆದ ರಾಜ್ಯ ಮಟ್ಟದ ‘ಪುಟ ಮೀರದ ಕಥೆ’ ಕಥಾ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಿುನಿಕತೆ ಕಥಾಲಕ್ಷಣದ ಹಲವು ಅಂಶಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಕನಿಷ್ಠ ಒಂದು ಭಾವ ಪರಿಣಾಮ ನೀಡಲು ಸಾಧ್ಯ ವಾದರೆ ಅದೇ ದೊಡ್ಡದು. ಇಲ್ಲಿ ವಾಚಿಸಲಾದ ಕಥೆಗಳು ತಕ್ಕಮಟ್ಟಿಗೆ ಯಶಸ್ಸು ಪಡೆದಿದೆ. ಈ ಪುಟ ಮೀರದ ಕತೆಗಳು ಸಮ್ಮೇಳನಕ್ಕೆ ಜೀವತುಂಬಿದೆ ಎಂದು ಮುದ್ದು ಮೂಡುಬೆಳ್ಳೆ ಹೇಳಿದರು.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ. ಕೃಷ್ಣದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಲ್ಲಚ್ಚು ಮಹೇಶ್ ಆರ್. ನಾಯಕ್, ಗುರುಪ್ರಸಾದ್ ಕಂಡಂಬಾರ್, ಪ್ರೊ.ಪಿ.ಕೃಷ್ಣಮೂರ್ತಿ, ಹರೀಶ್ ಸುಲಾಯ ಒಡ್ಡಂಬೆಟ್ಟು ಅತಿಥಿಗಳಾಗಿ ಭಾಗವಹಿಸಿದ್ದರು. ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳದ ವಿವಿಧ ಭಾಗಗಳಿಂದ ಸುಮಾರು 51 ಕಥೆಗಾರರು ಸಮ್ಮೇಳನದಲ್ಲಿ ಭಾಗವಹಿಸಿ ಒಂದು ಪುಟಕ್ಕೆ ಮೀರದ ಕಥೆಗಳನ್ನು ವಾಚಿಸಿದರು.
ಚುಸಾಪ ಉಪಾಧ್ಯಕ್ಷೆ ಡಾ. ಅರುಣಾ ನಾಗರಾಜ್ ಸ್ವಾಗತಿಸಿದರು. ರೇಖಾ ನಾರಾಯಣ್ ಪ್ರಾರ್ಥಿಸಿದರು. ಕಾರ್ಯದರ್ಶಿ ಜಯಲಕ್ಷ್ಮಿ ಕಟೀಲು ವಂದಿಸಿದರು. ಲೇಖಕಿ ಅರ್ಚನಾ ಎಂ. ಬಂಗೇರ ಕುಂಪಲ ಕಾರ್ಯಕ್ರಮ ನಿರೂಪಿಸಿದರು.







