ಆಕ್ಸ್ ಫರ್ಡ್ ಯುನಿವರ್ಸಿಟಿಯಲ್ಲಿ ಶಿಕ್ಷಣ ಪಡೆಯಲು ಮೂರೇ ಗಂಟೆಯಲ್ಲಿ 38 ಲಕ್ಷ ರೂ. ಸಂಗ್ರಹಿಸಿದ ಒಡಿಶಾದ ರ್ಯಾಪರ್

Photo: Twitter
ಹೊಸದಿಲ್ಲಿ: ರ್ಯಾಪರ್ ಹಾಗೂ ಜಾತಿ ವಿರೋಧಿ ಹೋರಾಟಗಾರ 27 ವರ್ಷದ ಸುಮೀತ್ ಸಾಮೋಸ್ ತುರುಕ್ ಅವರು ತಮ್ಮ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಶಿಕ್ಷಣ ಶುಲ್ಕಕ್ಕಾಗಿ ಕ್ರೌಡ್ ಫಂಡಿಂಗ್ ಮೂಲಕ ರೂ 38 ಲಕ್ಷ ಮೊತ್ತವನ್ನು ಕೇವಲ ಮೂರು ಗಂಟೆ ಅವಧಿಯಲ್ಲಿ ಕ್ರೋಢೀಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಡಿಶಾದ ಕೋರಪತ್ ಎಂಬಲ್ಲಿಯವರಾಗಿರುವ ಸುಮೀತ್ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು ದಿಲ್ಲಿಯ ಜೆಎನ್ಯುವಿನ ಮಾಜಿ ವಿದ್ಯಾರ್ಥಿಯಾಗಿದ್ದಾರೆ. ಅವರ ತಂದೆ ಪ್ರಾಥಮಿಕ ಶಾಲೆಯೊಂದರ ಶಿಕ್ಷಕರಾಗಿದ್ದರೆ ತಾಯಿ ಶುಶ್ರೂಷಕಿ (ಮಿಡ್ ವೈಫ್) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸುಮೀತ್ ಅವರ ಆಕ್ಸ್ ಫರ್ಡ್ ವಿವಿ ಅರ್ಜಿ ಜನವರಿಯಲ್ಲಿಯೇ ಸ್ವೀಕೃತಗೊಂಡಿದ್ದರೂ ಯಾವುದೇ ವಿದ್ಯಾರ್ಥಿವೇತನಕ್ಕೆ ಅವರು ಅರ್ಹತೆ ಪಡೆದಿರಲಿಲ್ಲ. ಅಂತಿಮವಾಗಿ ಅವರು ಒಡಿಶಾ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಆರಂಭದಲ್ಲಿ ಸಹಾಯದ ಭರವಸೆ ನೀಡಿದ್ದ ಸರಕಾರ ಇದು ಸುಮೀತ್ ಅವರ ಎರಡನೇ ಸ್ನಾತ್ತಕೋತ್ತರ ಪದವಿಗಾಗಿ ಶಿಕ್ಷಣ ಎಂದು ತಿಳಿದ ನಂತರ ಹಿಂದೆ ಜಾರಿತ್ತು.
ಕಾಶ್ಮೀರದ ಒಬ್ಬ ವಿದ್ಯಾರ್ಥಿನಿ ಆಕ್ಸ್ಫರ್ಡ್ ನಲ್ಲಿ ಶಿಕ್ಷಣ ಪಡೆಯಲು ಶುಲ್ಕ ಪಾವತಿಸಲು ಕ್ರೌಡ್ ಫಂಡಿಂಗ್ ಮಾಡಿದ್ದನ್ನು ತಿಳಿದ ಸುಮೀತ್ ತಮ್ಮ ಸ್ನೇಹಿತರ ಜತೆಗೂಡಿ ಆನ್ಲೈನ್ ಮೂಲಕ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ್ದರು. ಆದರೆ ಕೇವಲ ಮೂರು ಗಂಟೆಗಳಲ್ಲಿ ರೂ 38 ಲಕ್ಷ ಕ್ರೋಢೀಕರಣಗೊಂಡಾಗ ಅವರಿಗೆ ನಂಬಲು ಸಾಧ್ಯವಾಗಿರಲಿಲ್ಲ.
ಆದರೆ ಅವರಿಗೆ ತಮ್ಮ ವಿಮಾನ ಟಿಕೆಟ್ ಖರೀದಿ, ಆರೋಗ್ಯ ವಿಮೆ ಮತ್ತಿತರ ಖರ್ಚುಗಳಿಗಾಗಿ ಇನ್ನೂ ರೂ 9 ಲಕ್ಷ ಬೇಕಿದ್ದರೂ ಆನ್ಲೈನ್ನಲ್ಲಿ ಮಾಡಿದ ಮನವಿಯನ್ನು ಅವರು ಹಿಂದೆ ಪಡೆದಿದ್ದಾರೆ. "ಸಾಲ ಪಡೆಯುವ ಬದಲು ದೇಣಿಗೆ ಏಕೆ ಕೇಳುತ್ತಿದ್ದೀರಿ? ಜಾತಿಯನ್ನು ಹಣ ಪಡೆಯಲು ಬಳಸಿದ್ದೀರಿ" ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ ನಂತರ ನೊಂದು ತಮ್ಮ ಮನವಿ ವಾಪಸ್ ಪಡೆದಿದ್ದಾರೆ.
ಸ್ಪಾನಿಷ್ ಭಾಷೆಯಲ್ಲಿ ಪದವಿ ಹಾಗೂ ಲ್ಯಾಟಿನ್ ಅಮೆರಿಕನ್ ಸಾಹಿತ್ಯದಲ್ಲಿ ಎಂಎ ಪದವಿಯನ್ನು ಜೆಎನ್ಯುವಿನಿಂದ ಪಡೆದಿರುವ ಸುಮೀತ್ ಆಕ್ಸ್ ಫರ್ಡ್ ವಿವಿಯಲ್ಲಿ ಮಾಡರ್ನ್ ಸೌತ್ ಏಷ್ಯನ್ ಸ್ಟಡೀಸ್ ವಿಷಯದಲ್ಲಿ ಎಂಎಸ್ಸಿ ಶಿಕ್ಷಣ ಪಡೆಯಲಿದ್ದಾರೆ.







