ಶಾಲೆಯಿಂದ ಹೊರಗುಳಿದ ಮಕ್ಕಳ ದಾಖಲಾತಿಗೆ ಜನನ ಪ್ರಮಾಣ ಪತ್ರ, ವರ್ಗಾವಣೆ ಪತ್ರ ಕಡ್ಡಾಯವಲ್ಲ
ಶಿಕ್ಷಣ ಇಲಾಖೆ ಸುತ್ತೋಲೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.8: ಶಾಲೆಯಿಂದ ಹೊರಗುಳಿದ 6ರಿಂದ 14ವರ್ಷದ ಮಕ್ಕಳು ಶಾಲೆಗೆ ದಾಖಲಾಗಲು ಜನನ ಪ್ರಮಾಣ ಪತ್ರ, ವರ್ಗಾವಣೆ ಪತ್ರಗಳಿಗೆ ಒತ್ತಾಯಿಸಬಾರದೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆಯ ಆಯುಕ್ತರು, ಪ್ರಾಥಮಿಕ ಶಾಲಾ ಸಾರ್ವತ್ರೀಕರಣ ಕುರಿತಂತೆ 6ರಿಂದ 14ವರ್ಷದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆ ದಾಖಲು ಮಾಡುವ ಸಂದರ್ಭದಲ್ಲಿ ಪೋಷಕರು ಹಾಗೂ ಸಂಬಂಧಿಕರ ಬಳಿ ಜನನ ಪ್ರಮಾಣಪತ್ರ, ವರ್ಗಾವಣೆ ಪತ್ರ ಇಲ್ಲದಿದ್ದರೆ ಒತ್ತಾಯಿಸಬಾರದೆಂದು ತಿಳಿಸಿದ್ದಾರೆ.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಟ್ರಾಫಿಕ್ ಸಿಗ್ನಲ್ಗಳಲ್ಲಿ ಗೊಂಬೆ ಮತ್ತು ಹೂವುಗಳನ್ನು ಮಾರುವ ಮಕ್ಕಳು, ಪರಿತ್ಯಕ್ತ ಮಕ್ಕಳು, ಬೀದಿ ಮಕ್ಕಳು, ಅನಾಥ ಮಕ್ಕಳು ಇತ್ಯಾದಿ ಮಕ್ಕಳನ್ನು ಗುರುತಿಸಿ ಪುನರ್ವಸತಿ ನೀಡಬೇಕಾಗಿದೆ. ಹಾಗೂ ಈ ಮಕ್ಕಳು ಶಾಲೆಗೆ ದಾಖಲಾಗುವ ಸಂದರ್ಭದಲ್ಲಿ ಅವರ ವಯಸ್ಸು, ಕಲಿಕೆಯ ಆಧಾರದ ಮೇಲೆ ಸೂಕ್ತ ತರಗತಿಗೆ ದಾಖಲು ಮಾಡಿ, ಪರಿಹಾರ ಬೋಧನೆಯನ್ನು ನೀಡಿ ಶಾಲಾ ಮುಖ್ಯವಾಹಿನಿಗೆ ತರಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲು ಸುತ್ತೋಲೆಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ.







