ರೋಹಿಣಿ ಸಿಂಧೂರಿ ವರ್ಗಾವಣೆ ಹಿಂದಿರುವ ಭೂ ಹಗರಣದ ಬಗ್ಗೆ ತನಿಖೆಯಾಗಲಿ: ಸಿದ್ದರಾಮಯ್ಯ ಆಗ್ರಹ
''ಐಎಎಸ್ ಅಧಿಕಾರಿಗಳ ಕಿತ್ತಾಟಕ್ಕೆ ಪ್ರತಾಪ್ ಸಿಂಹ, ಸಾ.ರಾ. ಮಹೇಶ್ ಕಾರಣ''

ಬೆಂಗಳೂರು, ಜೂ.8: ಮೈಸೂರು ಜಿಲ್ಲೆಯ ಐಎಎಸ್ ಅಧಿಕಾರಿಗಳ ನಡುವಿನ ಕಿತ್ತಾಟಕ್ಕೆ ಬಿಜೆಪಿಯ ಚುನಾಯಿತ ಪ್ರತಿನಿಧಿಗಳು ಹಾಗೂ ಜೆಡಿಎಸ್ ನ ಸಾ.ರಾ. ಮಹೇಶ್ ಕಾರಣ. ಸಂಸದ ಪ್ರತಾಪ್ ಸಿಂಹ ಮೊದಲು ರೋಹಿಣಿ ಸಿಂಧೂರಿ ಅವರನ್ನು ಬೆಂಬಲಿಸಿದರು. ಈಗ ಶಿಲ್ಪಾನಾಗ್ ಪರವಾಗಿ ನಿಂತಿದ್ದಾರೆ. ಒಟ್ಟಿನಲ್ಲಿ ಇಬ್ಬರನ್ನೂ ಎತ್ತಿಕಟ್ಟಿ ಜಗಳ ತಂದಿಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಪತ್ರಿಕಾಗೋಷ್ಠಿ ಕರೆದು ಮಾತನಾಡಲು ಅಧಿಕಾರಿಗಳಿಗೆ ಅನುಮತಿ ನೀಡಿದವರು ಯಾರು? ಅನುಮತಿ ಇಲ್ಲದೆ ಪತ್ರಿಕಾಗೋಷ್ಠಿ ಕರೆಯಲು ಅವಕಾಶ ಇಲ್ಲ. ವರ್ಗಾವಣೆ ಮಾಡಿದರಷ್ಟೇ ಸಾಲದು ನಿಯಮ ಉಲ್ಲಂಘಿಸಿದ ಇಬ್ಬರು ಅಧಿಕಾರಿಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಭೂ ಹಗರಣದ ತನಿಖೆಗೆ ಮುಂದಾಗಿದ್ದೇ ನನ್ನ ವರ್ಗಾವಣೆಗೆ ಕಾರಣ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ. ಆ ಹಗರಣದ ಯಾವುದು? ಅದರಲ್ಲಿ ಯಾರೆಲ್ಲಾ ರಾಜಕಾರಣಿಗಳ ಶಾಮೀಲಾಗಿದ್ದಾರೆ? ಈ ವಿಷಯದಲ್ಲಿ ಯಾವ ಅಧಿಕಾರಿಗಳನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಿಜೆಪಿಯ ಸಂಸದ, ಶಾಸಕರು ಜಿಲ್ಲಾಧಿಕಾರಿ ಹುದ್ದೆಯಲ್ಲಿ ಶಿಲ್ಪಾ ನಾಗ್ ಅವರನ್ನು ಕೂರಿಸುವ ಪ್ರಯತ್ನ ಮಾಡುತ್ತಿದ್ದರು. ಅದು ವಿಫಲವಾದಾಗ ಇಬ್ಬರೂ ಅಧಿಕಾರಿಗಳನ್ನು ಪರಸ್ಪರ ಎತ್ತಿ ಕಟ್ಟಿದರು. ಸರ್ಕಾರ ಸದೃಢವಾಗಿದ್ದರೆ ಅಧಿಕಾರಿಗಳು ಈ ರೀತಿ ಬೇಕಾಬಿಟ್ಟಿ ನಡೆದುಕೊಳ್ಳುತ್ತಿರಲಿಲ್ಲ. ರಾಜಕಾರಣಿಗಳು ಅಧಿಕಾರಿಗಳನ್ನು ಬೆಂಬಲಿಸುವ ಅಥವಾ ವಿರೋಧಿಸುವ ಕೆಲಸ ಮಾಡಬಾರದು. ಅದು ತಪ್ಪು. ಇದು ರಾಜಕೀಯ ನಾಯಕತ್ವದ ವೈಫಲ್ಯ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಭೂ ಹಗರಣದ ತನಿಖೆಗೆ ಮುಂದಾಗಿದ್ದೇ ನನ್ನ ವರ್ಗಾವಣೆಗೆ ಕಾರಣ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ. ಆ ಹಗರಣದ ಯಾವುದು? ಅದರಲ್ಲಿ ಯಾರೆಲ್ಲಾ ರಾಜಕಾರಣಿಗಳ ಷಾಮೀಲಾಗಿದ್ದಾರೆ? ಈ ವಿಷಯದಲ್ಲಿ ಯಾವ ಅಧಿಕಾರಿಗಳನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕು. 8/10#Pressmeet
— Siddaramaiah (@siddaramaiah) June 8, 2021







