ಕೊಡಗು ಜಿಲ್ಲೆಯ ಈ ಗ್ರಾಮಕ್ಕೆ ಇಂದಿನವರೆಗೆ ಕೋವಿಡ್ ಸೋಂಕು ಸುಳಿಯಲೇ ಇಲ್ಲ

ಕೊಡಗು ಜಿಲ್ಲೆಯ ಈ ಗ್ರಾಮಕ್ಕೆ ಇಂದಿನವರೆಗೆ ಕೋವಿಡ್ ಸೋಂಕು ಸುಳಿಯಲೇ ಇಲ್ಲ
ಮಡಿಕೇರಿ, ಜೂ.8: ಕೊಡಗು ಜಿಲ್ಲೆಯ ಗ್ರಾಮ, ಗ್ರಾಮಗಳನ್ನು ಕಳೆದ ಎರಡು ತಿಂಗಳುಗಳಿಂದ ಕೋವಿಡ್ ಕಾಡುತ್ತಲೇ ಇದೆ. ಆದರೆ ಅಭ್ಯತ್‍ಮಂಗಲದ ಜ್ಯೋತಿ ನಗರವನ್ನು ಮಾತ್ರ ಇಲ್ಲಿಯವರೆಗೆ ಕೋವಿಡ್ ಕಾಡಲೇ ಇಲ್ಲ.
ಜ್ಯೋತಿ ನಗರದಲ್ಲಿ ಸುಮಾರು 203 ಮನೆಗಳಿವೆ, ಇಲ್ಲಿ ಇರುವುದೆಲ್ಲವೂ ಕೂಲಿ ಕಾರ್ಮಿಕ ಕುಟುಂಬಗಳೆ. ನಿತ್ಯ ಕೂಲಿ ಮಾಡಿದರಷ್ಟೇ ಈ ಕುಟುಂಬಗಳ ಜೀವನ ಸಾಗುತ್ತದೆ. ಆದರೆ ಕೋವಿಡ್ ಸೋಂಕನ್ನು ಗೆಲ್ಲಲೇಬೇಕೆಂದು ಪಣತೊಟ್ಟ ಇಲ್ಲಿನ ಮಂದಿ ಸರ್ಕಾರ ಕರ್ಫ್ಯೂ ಮತ್ತು ಲಾಕ್‍ಡೌನ್ ಜಾರಿಯಾದ ದಿನದಿಂದ ಮಾರ್ಗಸೂಚಿಗಳನ್ನು ಪಾಲಿಸುತ್ತಲೇ ಬಂದಿದ್ದಾರೆ. ಕೆಲಸಕ್ಕೆ ತೆರಳದೆ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ. ಅನಿವಾರ್ಯವಾಗಿ ದುಡಿಯಲೇಬೇಕಾದ ಶೇ.20 ರಷ್ಟು ಮಂದಿ ಮಾತ್ರ ದುಡಿದು ಬರುತ್ತಿದ್ದರು. ಇವರು ಕೂಡ ಮಾಸ್ಕ್ ಧರಿಸಿ, ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುತ್ತಿದ್ದರು.
ಈ ಭಾಗದಲ್ಲಿ ಶ್ರುಶೂಷಕಿ ಗೀತಾ, ಆಶಾ ಕಾರ್ಯಕರ್ತೆ ಲಿಲ್ಲಿ ನಳಿನಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ನಿರಂತರವಾಗಿ ಜನರ ಆರೋಗ್ಯದ ಮೇಲೆ ನಿಗಾ ವಹಿಸಿದರಲ್ಲದೆ ಕೋವಿಡ್ ಸೋಂಕಿನ ಕುರಿತು ಜಾಗೃತಿ ಮೂಡಿಸುತ್ತಲೇ ಇದ್ದರು. ಇದರ ಪರಿಣಾಮವಾಗಿ ಜ್ಯೋತಿ ನಗರದಲ್ಲಿ ಇಂದಿನವರೆಗೆ ಕೋವಿಡ್ ಸೋಂಕು ಸುಳಿಯಲೇ ಇಲ್ಲ. ಸುತ್ತಮುತ್ತಲ ವಾಲ್ನೂರು, ತ್ಯಾಗತ್ತೂರು, ಅಭ್ಯತ್‍ಮಂಗಲ, ಒಂಟಿಯಂಗಡಿ ಗ್ರಾಮಗಳು ಸೋಂಕಿನ ಕಷ್ಟವನ್ನು ಅನುಭವಿಸಿದ್ದವು.
ಕೋವಿಡ್ ಎದುರಿಸಿದ ಜ್ಯೋತಿ ನಗರದ ನಿವಾಸಿಗಳು ಈಗ ಇತರರಿಗೆ ಮಾದರಿಯಾಗಿದ್ದಾರೆ.








