ರಾಜ್ಯಗಳಿಗೆ ಉಚಿತ ಲಸಿಕೆ ವಿತರಣೆಗೆ ಕೇಂದ್ರದ ಮಾರ್ಗಸೂಚಿ ಪ್ರಕಟ

ಹೊಸದಿಲ್ಲಿ, ಜೂ.8: ಕೇಂದ್ರ ಸರಕಾರ ಒದಗಿಸಲಿರುವ ಉಚಿತ ಕೋವಿಡ್-19 ಲಸಿಕೆಯನ್ನು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಜನಸಂಖ್ಯೆ, ಸೋಂಕಿನ ಪ್ರಮಾಣ, ಲಸಿಕೀಕರಣ ಪ್ರಕ್ರಿಯೆಯ ಪ್ರಗತಿ ಮುಂತಾದ ಮಾನದಂಡಗಳ ಆಧಾರದಲ್ಲಿ ವಿತರಿಸಲಾಗುವುದು ಎಂದು ಕೇಂದ್ರ ಸರಕಾರ ಮಂಗಳವಾರ ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಅಲ್ಲದೆ ಲಸಿಕೆ ವ್ಯರ್ಥವಾದರೆ ಹಂಚಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದೆ. ಜೂನ್ 21ರಿಂದ ಎಲ್ಲಾ ರಾಜ್ಯಗಳಿಗೆ ಕೇಂದ್ರವೇ ಉಚಿತವಾಗಿ ಲಸಿಕೆ ಒದಗಿಸಲಿದೆ ಎಂದು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಇದಕ್ಕೆ ಸಂಬಂಧಿಸಿದ ಪರಿಷ್ಕೃತ ಮಾರ್ಗಸೂಚಿಯನ್ನು ಮಂಗಳವಾರ ಪ್ರಕಟಿಸಲಾಗಿದೆ.
►18 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ವರ್ಗದವರಲ್ಲಿ ಆದ್ಯತಾ ವರ್ಗವನ್ನು ಆಯಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಿರ್ಧರಿಸಬೇಕು.
► ಲಸಿಕೆ ಉತ್ಪಾದಕರನ್ನು ಪ್ರೋತ್ಸಾಹಿಸಲು ಮತ್ತು ಹೊಸ ಲಸಿಕೆ ಅಭಿವೃದ್ಧಿಗೆ ಹುರಿದುಂಬಿಸುವ ಉದ್ದೇಶದಿಂದ ಲಸಿಕೆ ಉತ್ಪಾದಕರು ಲಸಿಕೆಯನ್ನು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಒದಗಿಸುವ ಆಯ್ಕೆಯನ್ನೂ ನೀಡಲಾಗಿದೆ. ಸಂಸ್ಥೆಗಳ ಮಾಸಿಕ ಲಸಿಕೆ ಉತ್ಪಾದನೆಯ 25% ಪ್ರಮಾಣವನ್ನು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಪೂರೈಸಬಹುದು.
► ಖಾಸಗಿ ಆಸ್ಪತ್ರೆಗಳಿಗೆ ಒದಗಿಸುವ ಲಸಿಕೆಯ ದರವನ್ನು ಆಯಾ ಸಂಸ್ಥೆಗಳು ಘೋಷಿಸಬೇಕು ಮತ್ತು ಮುಂದಿನ ದಿನದಲ್ಲಿ ಯಾವುದೇ ಬದಲಾವಣೆ ಇದ್ದರೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು. ಖಾಸಗಿ ಆಸ್ಪತ್ರೆಗಳು ಪ್ರತೀ ಡೋಸ್ ಲಸಿಕೆಗೆ ಗರಿಷ್ಟ 150 ರೂ. ಸೇವಾಶುಲ್ಕ ವಿಧಿಸಬಹುದು. ಖಾಸಗಿ ಆಸ್ಪತ್ರೆಗಳು ವಿಧಿಸುವ ದರದ ಬಗ್ಗೆ ರಾಜ್ಯ ಸರಕಾರಗಳು ನಿಗಾ ವಹಿಸಬೇಕು.
ಲಸಿಕೆ ವ್ಯರ್ಥವಾಗುವ ವಿಷಯಕ್ಕೆ ಸಂಬಂಧಿಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಭಿನ್ನಾಭಿಪ್ರಾಯವಿದೆ. ಜಾರ್ಖಂಡ್ (ಸುಮಾರು 37%), ಛತ್ತೀಸ್ಗಢ(30%), ತಮಿಳುನಾಡು(15.5%), ಜಮ್ಮು-ಕಾಶ್ಮೀರ(10.8%) ಮತ್ತು ಮಧ್ಯಪ್ರದೇಶ(10.7%) ರಾಜ್ಯಗಳಲ್ಲಿ ವ್ಯರ್ಥವಾಗುವ ಲಸಿಕೆಯ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ(6.3%) ಹೆಚ್ಚು ಎಂದು ಕೇಂದ್ರ ಗೃಹ ಇಲಾಖೆ ಪ್ರಕಟಿಸಿತ್ತು. ಈ ಅಂಕಿಅಂಶ ಹಾಸ್ಯಾಸ್ಪದ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಟೀಕಿಸಿದ್ದರು.