ಕೊರೋನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಪಡೆದಿರುವ ಶುಲ್ಕಗಳ ಬಗ್ಗೆ ಸಮಗ್ರ ತನಿಖೆಯಾಗಲಿ: ಡಿವೈಎಫ್ಐ

ಸಾಂದರ್ಭಿಕ ಚಿತ್ರ
ಮಂಗಳೂರು, ಜೂ.8: ಕೊರೋನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಪಡೆದಿರುವ ಶುಲ್ಕಗಳ ಪರಿಶೀಲನೆಗೆ ಅಡಿಟ್ ಸಮಿತಿಯನ್ನು ರಚಿಸಿರುವ ದ.ಕ. ಜಿಲ್ಲಾಧಿಕಾರಿ ಪ್ರಥಮ ಹಂತದಲ್ಲಿ ಆಯುಷ್ಮಾನ್, ವಿಮೆಗಳ ಮೂಲಕ ಪಾವತಿಯಾಗಿರುವ ಶುಲ್ಕಗಳ ಬದಲಿಗೆ ರೋಗಿಗಳು ನೇರವಾಗಿ ಪಾವತಿಸಿರುವ ಶುಲ್ಕಗಳನ್ನು ಅಡಿಟ್ ಸಮಿತಿ ಪರಿಶೀಲಿಸಲಿದೆ ಎಂದಿದ್ದಾರೆ.
ಆದರೆ ಇದು ಸಾಕಾಗದು. ಕಳೆದೊಂದು ವರ್ಷದ ಅವಧಿಯಲ್ಲಿ ಸುಮಾರು 50 ಕೋ.ರೂ.ನಷ್ಟು ದೊಡ್ಡ ಮೊತ್ತವನ್ನು ಸರಕಾರದ ಖಜಾನೆಯಿಂದ ಆಯುಷ್ಮಾನ್ ಯೋಜನೆಯಡಿ ಕೊರೋನ ಚಿಕಿತ್ಸಾ ಮೊತ್ತವೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗಳ ತಿಜೋರಿ ಸೇರಿದೆ. ಇದರಲ್ಲಿ ಅಕ್ರಮ ಲೆಕ್ಕ ನಡೆದಿರುವ ಆರೋಪವೂ ಇದೆ. ಹಾಗಾಗಿ ಆಯುಷ್ಮಾನ್, ಇನ್ಸೂರೆನ್ಸ್ ಮೂಲಕ ಪಾವತಿಯಾದ ಶುಲ್ಕಗಳ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳು ಕೊರೋನ ಚಿಕಿತ್ಸೆಯ ಹೆಸರಿನಲ್ಲಿ ತಮ್ಮಲ್ಲಿ ದಾಖಲಾದ ರೋಗಿಗಳನ್ನು ಲೂಟಿ ಹೊಡೆಯುವ, ಸರಕಾರದ ದರ ಮಾರ್ಗಸೂಚಿಗಳನ್ನು ಎಗ್ಗಿಲ್ಲದೆ ಉಲ್ಲಂಘಿಸುತ್ತಿರುವ ಬಗ್ಗೆ ಡಿವೈಎಫ್ಐ ಆರಂಭದಲ್ಲೇ ಧ್ವನಿ ಎತ್ತಿತ್ತು. ಖಾಸಗಿ ಆಸ್ಪತ್ರೆಗಳ ನಿಯಂತ್ರಣ, ಸರಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಆಗ್ರಹಿಸಿ ಈ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರ ಕಚೇರಿಗಳ ಮುಂದೆಯೂ ಧರಣಿಯನ್ನು ನಡೆಸಿತ್ತು. ಆದರೆ ಖಾಸಗಿ ಆಸ್ಪತ್ರೆಗಳು ಕೊರೋನ 2ನೆ ಅಲೆಯಲ್ಲೂ ಚಾಳಿ ಮುಂದುವರಿಸಿತ್ತು. ಇದರ ವಿರುದ್ಧ ಅಪಸ್ವರ ಎತ್ತಿದೊಡನೆ ಹಲವು ಪ್ರಕರಣಗಳು ಬೆಳಕಿಗೆ ಬಂದವು. ಅಲ್ಲದೆ ಜಿಲ್ಲಾಡಳಿತ ಅಕ್ರಮವಾಗಿ ವಸೂಲಿ ಮಾಡಲ್ಪಟ್ಟ ಶುಲ್ಕಗಳ ಮೊತ್ತವನ್ನು ವಾಪಸ್ ಕೊಡಿಸಿತು. ಅಲ್ಲದೆ ಹೆಚ್ಚುವರಿ ವಸೂಲಿ ಮಾಡಲ್ಪಟ್ಟ ಪ್ರಕರಣಗಳಲ್ಲಿ ಆರೋಗ್ಯ ಇಲಾಖೆಗೆ ದೂರು ಸಲ್ಲಿಸುವಂತೆ ಮತ್ತು ಅಂತಹ ದೂರುಗಳಲ್ಲಿ ನಿಯಮಬದ್ಧವಲ್ಲದ ಹೆಚ್ಚುವರಿ ಮೊತ್ತವನ್ನು ವಾಪಸ್ ಕೊಡಿಸುವುದಾಗಿಯೂ ಜಿಲ್ಲಾಡಳಿತ ತಿಳಿಸಿತ್ತು. ಆದರೆ ಹೆಚ್ಚುವರಿ ಮೊತ್ತವನ್ನು ನೇರ ವಾಪಸ್ ಕೊಡಿಸುವ ಮುನ್ನ ಆ ಶುಲ್ಕಗಳನ್ನು ನೋಡಲ್ ಅಧಿಕಾರಿಗಳು ಪರಿಶೀಲನೆಗೆ ಒಳಪಡಿಸಬೇಕು. ಅಲ್ಲದೆ ಹೆಚ್ಚುವರಿ ಮೊತ್ತ ಹಾಕಿದ ಆಸ್ಪತ್ರೆಯ ಆಡಳಿತದ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಜಿಲ್ಲೆಯ 8 ಮೆಡಿಕಲ್ ಕಾಲೇಜುಗಳು, ಹತ್ತಾರು ಕಾರ್ಪೊರೇಟ್ ದರ್ಜೆಯ ಆಸ್ಪತ್ರೆಗಳನ್ನು ಹೊಂದಿರುವ ಮಂಗಳೂರಿನ ಖಾಸಗಿ ಮೆಡಿಕಲ್ ಲಾಬಿಯ ಬೇರುಗಳಿಗೆ ತುಳುನಾಡಿನ ಸರ್ವಪಕ್ಷಗಳಲ್ಲಿಯೂ ನೆಂಟಸ್ತಿಕೆ ಇದೆ. ಈ ಬೇರುಗಳನ್ನು ಅಲ್ಲಾಡಿಸಲು ಯತ್ನಿಸುವ ಅಧಿಕಾರಿಗಳನ್ನು ವರ್ಗಾಯಿಸುವುದು ಈ ಲಾಬಿಗೆ ಕಷ್ಟದ ಕೆಲಸವಲ್ಲ. ಹಾಗಾಗಿ ನಾಗರಿಕರನ್ನೊಳಗೊಂಡ ತನಿಖಾ ಸಮಿತಿಯನ್ನು ಜಿಲ್ಲಾಧಿಕಾರಿ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.
''ಗರ್ಭಿಣಿ ಆಸ್ಪತ್ರೆ ಅಲೆದಾಟ ಪ್ರಕರಣದ ಸತ್ಯಾಂಶ ಬಹಿರಂಗಗೊಳ್ಳಲಿ''
ತೀವ್ರ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದ್ದ ಕೊರೋನ ಸೋಂಕಿತ ಗರ್ಭಿಣಿಗೆ ಖಾಸಗಿ ವೈದ್ಯರು, ಆಸ್ಪತ್ರೆಗಳು ಕೂಟವಾಗಿ ಕಾರ್ಯಾಚರಿಸಿ ಚಿಕಿತ್ಸೆ ನಿರಾಕರಿಸಿದ ಪ್ರಕರಣದ ಪೊಲೀಸ್ ತನಿಖೆ ಮಾತ್ರ ಸಾಲದು. ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಸೂಕ್ಷ್ಮ ಅಂಶಗಳನ್ನು ಹೊಂದಿರುವ ಈ ಪ್ರಕರಣದ ಕುರಿತು ಜಿಲ್ಲಾಡಳಿತ ರಚಿಸಿದ ಆರೋಗ್ಯ ಇಲಾಖೆಯ ತಂಡದ ತನಿಖಾ ವರದಿಯನ್ನೂ ಬಹಿರಂಗಪಡಿಸಬೇಕು ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಯು ಧ್ವನಿ ಎತ್ತುವವರ ವಿರುದ್ಧ ತಿರುಗಿ ಬೀಳುತ್ತಿರುವುದು ಖಂಡನೀಯ. ಖಾಸಗಿ ಆಸ್ಪತ್ರೆಗಳು ರೋಗಿಗಳ ವಾರಸುದಾರರಿಂದ ದುಬಾರಿ ಮುಂಗಡ ಪಡೆಯುವುದು, ಮುಂಗಡ ನೀಡುವವರೆಗೂ ಗಂಭೀರಾವಸ್ಥೆಯ ರೋಗಿಗಳನ್ನು ಆಸ್ಪತ್ರೆಯ ಹೊರಗಡೆಯೇ ನಿಲ್ಲಿಸಿಕೊಳ್ಳುವುದು ಕೂಡ ನಡೆಯುತ್ತಿದೆ. ಜಿಲ್ಲಾಡಳಿತ ಇಂತಹ ಪ್ರವೃತ್ತಿಗೆ ತಕ್ಷಣ ಕಡಿವಾಣ ಹಾಕಬೇಕು ಎಂದೂ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







