ಉಡುಪಿ : ಯುವತಿ ಸೇರಿ ಕೋವಿಡ್ ಗೆ ಇಬ್ಬರು ಬಲಿ; 204 ಮಂದಿಗೆ ಕೊರೋನ ಪಾಸಿಟಿವ್

ಉಡುಪಿ, ಜೂ.8: ಕುಂದಾಪುರ ತಾಲೂಕಿನ 23 ವರ್ಷದ ಯುವತಿಯು ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್‌ಗೆ ಇಬ್ಬರು ಮೃತಪಟ್ಟಿದ್ದಾರೆ. ದಿನದಿನ ಇಳಿಮುಖದತ್ತ ಸಾಗಿರುವ ಸೋಂಕಿಗೆ ಇಂದು 204 ಮಂದಿ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ 504 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿದ್ದು, ಸದ್ಯ ಸಕ್ರಿಯ ಸೋಂಕಿತರ ಸಂಖ್ಯೆ ನಾಲ್ಕು ಸಾವಿರಕ್ಕಿಂತ ಕೆಳಕ್ಕಿಳಿದು 3783 ಆಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ಮಂಗಳವಾರ ಇಬ್ಬರು ಮೃತಪಟ್ಟಿದ್ದು, ಇವರಲ್ಲಿ 23 ವರ್ಷ ಪ್ರಾಯದ ಯುವತಿಯಲ್ಲದೇ ಉಡುಪಿ ತಾಲೂಕಿನ 75 ವರ್ಷ ಪ್ರಾಯದ ಹಿರಿಯ ಮಹಿಳೆಯೂ ಸೋಂಕಿಗೆ ಬಲಿಯಾಗಿದ್ದಾರೆ. ಯುವತಿಯಲ್ಲಿ ಕೊರೋನ ಗುಣಲಕ್ಷಣ ಹಾಗೂ ಉಸಿರಾಟದ ತೊಂದರೆ ಮಾತ್ರವಲ್ಲದೇ, ಮಧು ಮೇಹ, ಕಿಡ್ನಿ ಸಮಸ್ಯೆಯೊಂದಿಗೆ ಬಹುಅಂಗ ವೈಫಲ್ಯವೂ ಕಂಡುಬಂದಿತ್ತು. ಹಿರಿಯ ಮಹಿಳೆ ನ್ಯುಮೋನಿಯಾದೊಂದಿಗೆ ಮಧುಮೇಹ ಸಮಸ್ಯೆ ಯನ್ನು ಹೊಂದಿದ್ದರು.
ಪಾಸಿಟಿವ್ ಬಂದ 204 ಮಂದಿಯಲ್ಲಿ 103 ಮಂದಿ ಪುರುಷರು ಹಾಗೂ 101 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 95, ಕುಂದಾಪುರ ತಾಲೂಕಿನ 49 ಹಾಗೂ ಕಾರ್ಕಳ ತಾಲೂಕಿನ 51 ಮಂದಿ ಇದ್ದು, ಉಳಿದ 9 ಮಂದಿ ಹೊರಜಿಲ್ಲೆಯವರು. ಇವರಲ್ಲಿ 22 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 182 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ನಿನ್ನೆ ಒಟ್ಟು 504 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 58,752ಕ್ಕೇರಿದೆ. ನಿನ್ನೆ ಜಿಲ್ಲೆಯ 2616 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದ ವರ ಸಂಖ್ಯೆ 62,883 ಆಗಿದೆ ಎಂದು ಡಾ.ಉಡುಪ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 6,19,238 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಜಿಲ್ಲೆಯಲ್ಲಿ ಇಂದು ಕಪ್ಪು ಶಿಲೀಂದ್ರ ಸೋಂಕಿನ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ. ಜಿಲ್ಲೆಯ ಮೂವರು ಹಾಗೂ ಹೊರಜಿಲ್ಲೆಗಳ ಏಳು ಮಂದಿ ಈಗ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಜಿಲ್ಲೆಯ ಇಬ್ಬರು ಮೃತಪಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
10,465 ಮಂದಿಗೆ ಲಸಿಕೆ
ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 10,465 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 9863 ಮಂದಿ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದರೆ, 602 ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಇಂದು 18ರಿಂದ 44 ವರ್ಷದೊಳಗಿನ 2885 ಮಂದಿ ಮೊದಲ ಡೋಸ್‌ನ್ನು ಪಡೆದಿದ್ದಾರೆ. 45 ವರ್ಷ ಮೇಲಿನ 6749 ಮಂದಿ ಮೊದಲ ಡೋಸ್ ಹಾಗೂ 591 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ. 18 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 222 ಮಂದಿ ಮುಂಚೂಣಿ ಕಾರ್ಯಕರ್ತರು ಸಹ ಇಂದು ಲಸಿಕೆ ಸ್ವೀಕರಿಸಿದವರಲ್ಲಿ ಸೇರಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ 2,85,000 ಮಂದಿ ಲಸಿಕೆಯ ಮೊದಲ ಡೋಸ್‌ನ್ನು ಪಡೆದರೆ, 87,886 ಮಂದಿ ಎರಡನೇ ಡೋಸ್‌ನ್ನು ಪಡೆದುಕೊಂಡಿದ್ದಾರೆ ಎಂದು ಡಾ.ಉಡುಪ ತಿಳಿಸಿದರು.







