ಉಡುಪಿ; ಜೂ.10-14ರವರೆಗೆ 16 ಗ್ರಾಪಂಗಳಲ್ಲಿ ಸಂಪೂರ್ಣ ಲಾಕ್‌ಡೌನ್: ಜಿಲ್ಲಾಧಿಕಾರಿ ಜಗದೀಶ್

ಉಡುಪಿ, ಜೂ.8: ಜಿಲ್ಲೆಯಲ್ಲಿ ಸದ್ಯ 50ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳಿರುವ ಒಟ್ಟು 16 ಗ್ರಾಪಂಗಳಲ್ಲಿ ಸಂಪೂರ್ಣ ಲಾಕ್‌ಡೌನ್‌ನ್ನು ಮುಂದುವರಿಸಲು ನಿರ್ಧರಿಸಲಾಗಿದ್ದು, ಈ ಎಲ್ಲಾ ಗ್ರಾಪಂಗಳ ವ್ಯಾಪ್ತಿಯಲ್ಲಿ ಜೂ.10ರ ಬೆಳಗ್ಗೆ 6:00ಗಂಟೆಯಿಂದ ಜೂ.14ರ ಮುಂಜಾನೆ 6:00ಗಂಟೆಯ ವರೆಗೆ ಸಂಪೂರ್ಣ ಲಾಕ್‌ಡೌನ್‌ನ್ನು ವಿಧಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.
ಸಂಪೂರ್ಣ ಲಾಕ್‌ಡೌನ್‌ಗೊಳಗಾಗಿರುವ ಗ್ರಾಪಂಗಳೆಂದರೆ ಕಾರ್ಕಳ ತಾಲೂಕಿನ ಬೆಳ್ಮಣ್, ಮಿಯಾರು, ಪಳ್ಳಿ, ಕುಕ್ಕುಂದೂರು, ನಲ್ಲೂರು, ಮರ್ಣೆ ಗ್ರಾಪಂಗಳು, ಬೈಂದೂರು ತಾಲೂಕಿನ ಶಿರೂರು, ಜಡ್ಕಲ್, ನಾಡ ಗ್ರಾಪಂಗಳು, ಕುಂದಾಪುರ ತಾಲೂಕಿನ ಗಂಗೊಳ್ಳಿ, ಆಲೂರು, ಕಾಪು ತಾಲೂಕಿನ ಬೆಳ್ಳೆ, ಶಿರ್ವ, ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ, ಆವರ್ಸೆ ಹಾಗೂ ಹೆಬ್ರಿ ತಾಲೂಕಿನ ವರಂಗ ಗ್ರಾಪಂ. ಇವುಗಳಲ್ಲಿ 14 ಗ್ರಾಪಂಗಳು ಈ ಹಿಂದೆ ಸಂಪೂರ್ಣ ಲಾಕ್‌ಡೌನ್ ಗೊಳಗಾದ 40 ಗ್ರಾಪಂಗಳಲ್ಲಿ ಸ್ಥಾನ ಪಡೆದವುಗಳಾಗಿವೆ. ನಲ್ಲೂರು ಹಾಗೂ ಗಂಗೊಳ್ಳಿ ಗ್ರಾಪಂಗಳು ಮಾತ್ರ ಇಲ್ಲಿ ಹೊಸದಾಗಿ ಸ್ಥಾನ ಪಡೆದಿವೆ.
ಕೋವಿಡ್-19 ಸಾಂಕ್ರಾಮಿಕ ರೋಗ ತೀವ್ರ ಸ್ವರೂಪವನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಸರಣದ ಸರಪಳಿಯನ್ನು ಮುರಿಯಲು ಈಗಾಗಲೇ ನಿಷೇಧಾಜ್ಞೆ ಜಾರಿಯಲ್ಲಿದ್ದು, ಸಾಂಕ್ರಾಮಿಕದ ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ 50ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳಿರುವ ಗ್ರಾಪಂಗಳನ್ನು ಸಂಪೂರ್ಣ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.
ಇಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಇವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್-19ರ ವಸ್ತುಸ್ಥಿತಿ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ವಿಷಯದ ಬಗ್ಗೆ ಚರ್ಚಿಸಿ, ಆರೋಗ್ಯ ಇಲಾಖೆ ನೀಡಿದ ಅಂಕಿಅಂಶಗಳನ್ನು ಪರಿಶೀಲಿಸಿ, ಲಾಕ್‌ಡೌನ್‌ನಿಂದ ಧನಾತ್ಮಕ ಪರಿಣಾಮ ಉಂಟಾಗಿರುವುದನ್ನು ಗಮನಿಸಿ, ಇನ್ನೂ 50ಕ್ಕಿಂತ ಅಧಿಕ ಪ್ರಕರಣ ಗಳಿರುವ ಗ್ರಾಪಂಗಳಲ್ಲಿ ಸಂಪೂರ್ಣ ಲಾಕ್‌ಡೌನ್‌ನ್ನು ಇನ್ನು ಕೆಲವು ದಿನ ಮುಂದುವರಿಸಲು ನಿರ್ಧರಿಸಲಾಯಿತು. ಅದರಂತೆ ಈ 16 ಗ್ರಾಪಂಗಳಲ್ಲಿ ಜೂ.10ರಿಂದ 14ರವರೆಗೆ ಲಾಕಡೌನ್ ಮುಂದುವರಿಸಲು ತೀರ್ಮಾನಿಸಲಾ ಯಿತು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಗ್ರಾಪಂ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳು, ನರ್ಸಿಂಗ್‌ಹೋಮ್, ಕ್ಲಿನಿಕ್, ಲ್ಯಾಬ್, ಟೆಲಿಮೆಡಿಸಿನ್ ಸೌಲಭ್ಯ, ಔಷಧಲಾಯಗಳು ಜನೌಷಧಿ ಕೇಂದ್ರಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ಇದೆ. ಅದೇ ರೀತಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಸೀಮಿತ ಅವಧಿಗೆ ಹಾಲಿನ ಸಂಗ್ರಹಕ್ಕೆ ಅವಕಾಶವಿದೆ.ರಾಜ್ಯ-ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪೆಟ್ರೋಲ್ ಬಂಕ್‌ಗಳಿಗೆ, ಕೃಷಿ ಮತ್ತು ಕೃಷಿ ಸಂಬಂಧಿ ಚಟುವಟಿಕೆಗಳಿಗೆ, ಅಗತ್ಯ ತುರ್ತು ವೈದ್ಯಕೀಯ ಸೇವೆಗಳ ವಾಹನಗಳ ಸಂಚಾರಕ್ಕೆ ಅವಕಾಶವಿರುತ್ತದೆ.
ಮೇಲಿನ ಆದೇಶಗಳನ್ನು ಪಾಲಿಸದೇ ಇದ್ದವರ ಮೇಲೆ ವಿಕೋಪ ನಿರ್ವಹಣಾ ಕಾಯ್ದೆ-2005, ಕರ್ನಾಟಕ ಎಪಿಡಮಿಕ್ ಡೀಸಿಸಸ್ ಕಾಯ್ದೆ 2020 ಹಾಗೂ ಐಪಿಸಿ ಸೆಕ್ಷನ್ 188 ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.







