ದ.ಕ.ಜಿಲ್ಲೆ : ಬ್ಲ್ಯಾಕ್ ಫಂಗಸ್ 5 ಪ್ರಕರಣ ಪತ್ತೆ
ಮಂಗಳೂರು, ಜೂ.8: ದ.ಕ. ಜಿಲ್ಲೆಯಲ್ಲಿ ಮಂಗಳವಾರ 5 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲವೂ ಹೊರಜಿಲ್ಲೆಗೆ ಸಂಬಂಧಿಸಿ ದವರಾಗಿದ್ದಾರೆ. ಅಂದರೆ ಬೆಂಗಳೂರು, ಹಾವೇರಿ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗೆ ಸೇರಿದ ಐವರಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಂಡು ಬಂದಿದೆ.
ದ.ಕ.ಜಿಲ್ಲೆಯಲ್ಲಿ ಸದ್ಯ 54 ಬ್ಲ್ಯಾಕ್ ಫಂಗಸ್ ಸಕ್ರಿಯ ಪ್ರಕರಣಗಳು ಇದೆ. ಇದರಲ್ಲಿ 11 ದ.ಕ.ಜಿಲ್ಲೆಗೆ ಮತ್ತು 43 ಪ್ರಕರಣಗಳು ಹೊರಜಿಲ್ಲೆಗೆ ಸಂಬಂಧಿಸಿದ್ದಾಗಿದೆ. ನಗರದ ಜ್ಯೋತಿಯ ಕೆಎಂಸಿಯಲ್ಲಿ ದ.ಕ.ಜಿಲ್ಲೆಯ ಒಬ್ಬರು, ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಹೊರ ಜಿಲ್ಲೆಯ ನಾಲ್ಕು ಮತ್ತು ದ.ಕ.ಜಿಲ್ಲೆಯ ಒಬ್ಬರು, ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಹೊರ ಜಿಲ್ಲೆಯ ಒಬ್ಬರು, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದ.ಕ.ಜಿಲ್ಲೆಯ ಇಬ್ಬರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರ ಜಿಲ್ಲೆಯ 37 ಮತ್ತು ದ.ಕ.ಜಿಲ್ಲೆಯ 6 ಮಂದಿ, ಮಂಗಳಾ ಆಸ್ಪತ್ರೆಯಲ್ಲಿ ಹೊರ ಜಿಲ್ಲೆಯ ಒಬ್ಬರು , ಎ.ಜೆ.ಆಸ್ಪತ್ರೆಯಲ್ಲಿ ದ.ಕ.ಜಿಲ್ಲೆಯ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಮಂಗಳವಾರ ಒಬ್ಬರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಮಂದಿ ಬ್ಲ್ಯಾಕ್ ಫಂಗಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇವರೆಲ್ಲರೂ ಹೊರ ಜಿಲ್ಲೆಯವರಾಗಿದ್ದಾರೆ.
ಬ್ಲ್ಯಾಕ್ ಫಂಗಸ್ ಲಕ್ಷಣ ಹೊಂದಿದ್ದ ದ.ಕ.ಜಿಲ್ಲೆಯ ಇಬ್ಬರು ಮತ್ತು ಹೊರ ಜಿಲ್ಲೆಯ ಐವರು ಸೇರಿ ಒಟ್ಟು 7 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ.





