ರಾಜಸ್ಥಾನ: ಮರಳುಗಾಡಲ್ಲಿ ಕುಡಿಯಲು ನೀರು ಸಿಗದೆ ಬಾಲಕಿ ಸಾವು

PHOTO :twitter.com/SartajAlamIndia/
ಜೈಪುರ,ಜೂ.8: ಮರಳುಗಾಡಿನಲ್ಲಿ ತನ್ನ ಅಜ್ಜಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಆರು ವರ್ಷದ ಬಾಲಕಿಯೊಬ್ಬಳು ಕುಡಿಯಲು ನೀರು ಸಿಗದೆ ಮೃತಪಟ್ಟ ಧಾರುಣ ಘಟನೆ ರಾಜಸ್ತಾನದ ಜಾಲೋರ್ ಜಿಲ್ಲೆಯಲ್ಲಿ ಮಂಗಳವಾರ ವರದಿಯಾಗಿದೆ.
ಬಾಲಕಿ ಮಂಜು (6 ವರ್ಷ) ತನ್ನ ಅಜ್ಜಿ ಸುಖಿ ದೇವಿ(60) ಜೊತೆೆ ಬಂಧುಗಳನ್ನು ಭೇಟಿಯಾಗಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಧಾರುಣ ಘಟನೆ ನಡೆದಿದೆ. ಸಿರೋಹಿ ಜಿಲ್ಲೆಯಲ್ಲಿರುವ ರಾಯ್ಪುರ ಗ್ರಾಮದಲ್ಲಿರುವ ಬಂಧುಗಳ ಮನೆಯಿಂದ ಜಲೋರ್ ಜಿಲ್ಲೆಯಲ್ಲಿರುವ ಡುಂಗ್ರಿ ಗ್ರಾಮದಲ್ಲಿರುವ ಮನೆಗೆ ಅವರು ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದರು.
ಕಡುಬಿಸಿಲಲ್ಲಿ ಅವರು 7 ಕಿ.ಮೀ. ನಡೆದುಕೊಂಡು ಹೋದ ಬಳಿಕ ಬಾಲಕಿ ಹಾಗೂ ಅಜ್ಜಿ ಬಾಯಾರಿಕೆಯಿಂದಾಗಿ ನಿತ್ರಾಣಗೊಂಡಿದ್ದರು. ಮುಂದೆ ನಡೆಯಲು ಸಾಧ್ಯವಾಗದೆ ಅವರು ಸ್ಥಳದಲ್ಲೇ ವಿಶ್ರಮಿಲು ನಿರ್ಧರಿಸಿದರು. ಆ ಹೊತ್ತಿಗೆ ಬಿಸಿಲ ತಾಪಮಾನ 45 ಡಿಗ್ರಿಗೆ ತಲುಪಿತ್ತು.
ಅಸುಪಾಸಿನಲ್ಲಿ ಯಾವುದೇ ಮನೆಗಳಿಲ್ಲದೆ ಇದ್ದುದರಿಂದ ಅವರಿಗೆ ಕುಡಿಯಲು ನೀರು ಸಿಗಲಿಲ್ಲ. ಬಿಸಿಲ ಝಳ, ಬಾಯಾರಿಕೆಯಿಂದಾಗಿ 6 ವರ್ಷದ ಬಾಲಕಿ ಮಂಜು ಸ್ಥಳದಲ್ಲೇ ಪ್ರಾಣಕಳೆದುಕೊಂಡರೆ, ಅಜ್ಜಿ ಪ್ರಜ್ಞಾಹೀನರಾಗಿದ್ದರು. ಆನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ವೃದ್ಧೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯ ಬಗ್ಗೆ ರಾಜಸ್ಥಾನ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಹೇಳಿಕೆ ನೀಡಿದ್ದು, ಬಾಲಕಿ ಹಾಗೂ ಆಕೆಯ ಅಜ್ಜಿಯು ದಾರಿ ತಪ್ಪಿ ಮರಳುಗಾಡಿನಲ್ಲಿ ಪ್ರಯಾಣಿಸಿದ್ದಾರೆಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ರಾಜ್ಯದ ಪ್ರತಿಪಕ್ಷ ಬಿಜೆಪಿಯು ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು ಸ್ವಾತಂತ್ರ ದೊರೆತು 70 ವರ್ಷಗಳಾದ ನಂತರವೂ ಸರಕಾರವು ತನ್ನ ಜನರಿಗೆ ಕುಡಿಯುವ ನೀರನ್ನು ಖಾತರಿಪಡಿಸಲು ಸಾಧ್ಯವಾಗದಿರುವುದು ನಾಚಿಕೆಗೇಡೆಂದು ಹೇಳಿದೆ.





