ಬಡತನ ನಿವಾರಣೆಯಲ್ಲಿ ಭಾರತದ ಉತ್ತಮ ಸಾಧನೆ: ನೀತಿ ಆಯೋಗ

ಹೊಸದಿಲ್ಲಿ,ಜೂ.8: ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 2020-21ನೇ ಸಾಲಿನಲ್ಲಿ ದೇಶವು ಬಡತನ ನಿವಾರಣೆ ಮತ್ತು ಶೂನ್ಯ ಹಸಿವಿನ ಗುರಿ ಸಾಧಿಸುವ ನಿಟ್ಟಿನಲ್ಲಿ ಉತ್ತಮ ಸಾಧನೆಯನ್ನು ಮಾಡಿದೆ ಮತ್ತು ಅಸಮಾನತೆ ಅಂಕಗಳನ್ನು ತಗ್ಗಿಸಿದೆ ಎಂದು ನೀತಿ ಆಯೋಗದ ಇತ್ತೀಚಿನ ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್ಡಿಜಿ) ಸೂಚಿಯು ಹೇಳಿದೆ. ನೀತಿ ಆಯೋಗವು ಕಳೆದ ವಾರ ತನ್ನ ವರದಿಯನ್ನು ಬಿಡುಗಡೆಗೊಳಿಸಿದೆ.
ಬಡತನ ನಿವಾರಣೆಗೆ ಸಂಬಂಧಿಸಿದಂತೆ ಭಾರತವು 2020-21ರಲ್ಲಿ ತನ್ನ ಸೂಚ್ಯಂಕವನ್ನು 2019-20ರ 50ರಿಂದ 60ಕ್ಕೆ ಹೆಚ್ಚಿಸಿಕೊಂಡಿದೆ. ಹಸಿವು ಕಳವಳದ ವಿಷಯವಾಗಿಯೇ ಮುಂದುವರಿದಿದೆಯಾದರೂ ಶೂನ್ಯ ಹಸಿವಿನ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ದೇಶವು ತನ್ನ ಅಂಕಗಳನ್ನು 35ರಿಂದ 47ಕ್ಕೆ ಹೆಚ್ಚಿಸಿಕೊಂಡಿದೆ. ಅಸಮಾನತೆ ಇಳಿಕೆಗೆ ಸಂಬಂಧಿಸಿದಂತೆ ಅಂಕಗಳು 64ರಿಂದ 67ಕ್ಕೆ ಏರಿವೆ ಎಂದು ವರದಿಯು ತಿಳಿಸಿದೆ.
ವರದಿಯು ತಿಳಿಸಿರುವಂತೆ ಬಡತನ ನಿವಾರಣೆ ಕ್ಷೇತ್ರದಲ್ಲಿ ತಮಿಳುನಾಡು 86 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಗೋವಾ ಮತ್ತು ಕೇರಳ (ಎರಡೂ 83 ಅಂಕ) ಹಾಗು ದಿಲ್ಲಿ (81) ನಂತರದ ಸ್ಥಾನಗಳಲ್ಲಿವೆ. ಬಿಹಾರ,ಜಾರ್ಖಂಡ್ ಮತ್ತು ಒಡಿಶಾಗಳ ಸಾಧನೆಗಳು ತೀರ ಕಳಪೆಯಾಗಿದ್ದು,ಅವುಗಳ ಸೂಚ್ಯಂಕ ಅನುಕ್ರಮವಾಗಿ 32,36 ಮತ್ತು 41 ಆಗಿವೆ.





