ಲಡಾಖ್ ನಲ್ಲಿ ಚೀನೀ ಜೆಟ್ ವಿಮಾನಗಳ ಕವಾಯತು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದೇವೆ:ಭಾರತದ ಪ್ರತಿಕ್ರಿಯೆ

ಹೊಸದಿಲ್ಲಿ, ಜೂ.8: ಲಡಾಖ್ ನ ವಾಸ್ತವಿಕ ನಿಯಂತ್ರಣ ರೇಖೆಯ ಬಗ್ಗೆ ತಗಾದೆ ಮುಂದುವರಿಸಿರುವ ಚೀನಾ, ತನ್ನ ಯುದ್ಧವಿಮಾನಗಳ ಬೃಹತ್ ವೈಮಾನಿಕ ಕಸರತ್ತನ್ನು ಪೂರ್ವ ಲಡಾಖ್ನಲ್ಲಿ ಇತ್ತೀಚೆಗೆ ನಡೆಸಿದೆ ಎಂದು ವರದಿಯಾಗಿದೆ. ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿರುವುದಾಗಿ ಭಾರತ ಹೇಳಿದೆ.
ಪೂರ್ವ ಲಡಾಖ್ ನ ಎದುರು ಭಾಗದಲ್ಲಿ ಚೀನಾ ನಿರ್ಮಿಸಿರುವ ವಾಯುನೆಲೆಯಲ್ಲಿ ಸುಮಾರು 22 ಯುದ್ಧವಿಮಾನಗಳು ಕವಾಯತು ನಡೆಸಿವೆ. ಚೀನಾ ಯುದ್ಧವಿಮಾನಗಳ ಕವಾಯತು ಚೀನಾದ ವ್ಯಾಪ್ತಿಗೆ ಸೀಮಿತವಾಗಿದ್ದವು . ಜೆ-11 ಹಾಗೂ ಅತ್ಯಾಧುನಿಕ ಸಮರ ವಿಮಾನ ಜೆ-16 ಕೂಡಾ ಇದರಲ್ಲಿ ಪಾಲ್ಗೊಂಡಿವೆ.
ಲಡಾಖ್ ವಲಯದಲ್ಲಿ ತನ್ನ ವ್ಯಾಪ್ತಿಗೆ ಸೇರಿದ ಪ್ರದೇಶವಾದ ಹೊಟಾನ್, ಗರ್ ಗುನ್ಸಾ, ಹೊಪಿಂಗ್, ಲಿಂಝಿ, ಪಂಗಟ್ ಮತ್ತು ಕಶ್ಗರ್ ವಾಯುನೆಲೆಯನ್ನು ಚೀನಾ ಇತ್ತೀಚೆಗೆ ಮೇಲ್ದರ್ಜೆಗೆ ಏರಿಸಿದ್ದು ಇಲ್ಲಿ ಎಲ್ಲಾ ಯುದ್ಧವಿಮಾನಗಳ ಕಾರ್ಯಾಚರಣೆಗೂ ಅನುಕೂಲವಾಗುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ವಾಯುನೆಲೆಯೊಳಗೆ ಇರಿಸಿರುವ ವಿಮಾನಗಳು ಹೊರಗಿನವರಿಗೆ ಕಾಣಿಸದ ರೀತಿಯಲ್ಲಿ ಇಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
ಈ ವರ್ಷದ ಬೇಸಿಗೆಯಲ್ಲಿ ಚೀನಾದ ವಾಯುನೆಲೆಯಲ್ಲಿ ಹೆಚ್ಚಿನ ಯುದ್ಧವಿಮಾನಗಳ ನಿಯೋಜನೆಯಿಂದ ಎಚ್ಚೆತ್ತುಕೊಂಡ ಭಾರತ ಲಡಾಕ್ನಲ್ಲಿ ಮಿಗ್-29 ಯುದ್ಧವಿಮಾನ ಸಹಿತ ತನ್ನ ವಾಯುಬಲವನ್ನು ವೃದ್ಧಿಸಿಕೊಂಡಿದೆ. ಜೊತೆಗೆ ಅತ್ಯಾಧುನಿಕ ರಫೇಲ್ ಯುದ್ಧವಿಮಾನಗಳೂ ದೈನಂದಿನ ಕಸರತ್ತು ನಡೆಸಿ ಭಾರತ ಸೇನೆಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿವೆ. ಕಳೆದ ವರ್ಷದ ಲಡಾಖ್ ಬಿಕ್ಕಟ್ಟಿನ ಸಂದರ್ಭ ಚೀನಾದ ಯುದ್ಧವಿಮಾನ ಭಾರತೀಯ ವಾಯುಪ್ರದೇಶವನ್ನು ಉಲ್ಲಂಘಿಸುವ ಪ್ರಯತ್ನ ನಡೆಸಿದಾಗ ಭಾರತದ ವಿಮಾನಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿವೆ.
ಚೀನಾವು ಪ್ಯಾಂಗಾಂಗ್ ಸರೋವರ ಪ್ರದೇಶದಿಂದ ತನ್ನ ಪಡೆಗಳನ್ನು ಹಿಂಪಡೆದಿದ್ದರೂ, ಭಾರತದ ನೆಲೆಗಳ ಮೇಲೆ ದೀರ್ಘ ಅಂತರದಿಂದ ದಾಳಿ ನಡೆಸಬಲ್ಲ ಸಾಮರ್ಥ್ಯವಿರುವ ಎಚ್ಕ್ಯೂ-9 ಮತ್ತು ಎಚ್ಕ್ಯೂ-16 ವಿಮಾನಗಳ ಸಹಿತ ತನ್ನ ವಿಮಾನ ಪಡೆಯನ್ನು ಲಡಾಕ್ ಪ್ರದೇಶದಲ್ಲೇ ಇರಿಸಿಕೊಂಡಿದೆ. ಆದರೆ ಲಡಾಕ್ ವಲಯದಲ್ಲಿ ಚೀನಾದ ವಾಯುನೆಲೆ ಎತ್ತರದ ಗುಡ್ಡಗಳಲ್ಲಿ ಇರುವುದರಿಂದ ಇಲ್ಲಿಂದ ಮೇಲಕ್ಕೇರಿ ದಾಳಿ ನಡೆಸಬೇಕು. ಆದರೆ ಭಾರತದ ವಾಯುಪಡೆ ಬಯಲುಪ್ರದೇಶದಿಂದ ಮೇಲಕ್ಕೇರಿ ಕ್ಷಿಪ್ರವಾಗಿ ದಾಳಿ ನಡೆಸಲು ಸಾಧ್ಯವಿರುವುದರಿಂದ ಹೆಚ್ಚಿನ ಅನುಕೂಲವಿದೆ ಎಂದು ಮೂಲಗಳು ಹೇಳಿವೆ.