ಪದವಿ ಪರೀಕ್ಷೆಗಳ ರದ್ದತಿಗೆ ಎನ್‌ಎಸ್‌ಯುಐ ಮನವಿ

ಮಂಗಳೂರು, ಜೂ.8: ಎಲ್ಲಾ ಪದವಿ ಪರೀಕ್ಷೆಗಳನ್ನು ರದ್ದುಗೊಳಿಸಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಬೇಕು ಎಂದು ಆಗ್ರಹಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗೆ ದ.ಕ. ಜಿಲ್ಲಾ ಎನ್‌ಎಸ್‌ಯುಐ ನಿಯೋಗ ಮಂಗಳವಾರ ಮನವಿ ಸಲ್ಲಿಸಿತು.
ಲಾಕ್‌ಡೌನ್ ಮತ್ತು ಕೊರೋನದಿಂದ ವಿದ್ಯಾರ್ಥಿಗಳಿಗೆ ಆನ್‌ಲೈನ್ ನಲ್ಲಿ ತರಗತಿ ನಡೆದರೂ ಸರಿಯಾದ ಶಿಕ್ಷಣ ಸಿಗದೆ ಕಂಗೆಟ್ಟಿದ್ದಾರೆ, ಆನ್‌ಲೈನ್ ಶಿಕ್ಷಣದಿಂದ ಕೆಲವು ವಿವಿಗಳಲ್ಲಿ 1,3,5,7 ನೇ ಸೆಮಿಸ್ಟರ್ ಪರೀಕ್ಷೆಗಳು ನಡೆಯದೆ ಬಾಕಿಯುಳಿದಿದೆ. ಹಾಗಾಗಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪರೀಕ್ಷೆಯನ್ನು ರದ್ದುಗೊಳಿಸಿ ಮುಂದಿನ ತರಗತಿಗೆ ತೇರ್ಗಡೆಗೊಳಿಸಬೇಕಾಗಿದೆ. ಪರೀಕ್ಷೆಯನ್ನು ರದ್ದುಗೊಳಿಸದಿದ್ದರೆ ಒಂದು ವರ್ಷದ ಎರಡೂ ಸೆಮಿಸ್ಟರ್‌ಗಳನ್ನು ಒಂದೇ ಸಮಯದಲ್ಲಿ ಬರೆಯಬೇಕಾಗುತ್ತದೆ. ಇಂತಹ ಸಂಕಷ್ಟ ಸಮಯದಲ್ಲಿ ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಪರೀಕ್ಷೆಯನ್ನು ಬರೆಯಲು ಸಾಧ್ಯವಾಗದು ಎಂದು ಎನ್‌ಎಸ್‌ಯುಐ ಮನವಿಯಲ್ಲಿ ತಿಳಿಸಿದೆ.
ಲಾಕ್‌ಡೌನ್‌ನಿಂದ ವಿದ್ಯಾರ್ಥಿಗಳ ಹೆತ್ತವರು ಕೂಡ ಆರ್ಥಿಕವಾಗಿ ಕಂಗೆಟ್ಟಿದ್ದು ಮಕ್ಕಳ ಕಾಲೇಜು ಶುಲ್ಕ ಭರಿಸಲು ಹೆಣಗಾಡುತ್ತಿದ್ದಾರೆ. ಸರಕಾರವೂ ವಿದ್ಯಾರ್ಥಿವೇತನ ನೀಡದೆ ಸತಾಯಿಸುತ್ತಿದೆ. ಇಂತಹ ಸಮಯದಲ್ಲಿ ಕೆಲವು ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕಗಳನ್ನು ಪಡೆಯುತ್ತಿರುವ ಬಗ್ಗೆ ದೂರುಗಳಿವೆ. ಅಂತಹ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎನ್‌ಎಸ್‌ಯುಐ ಆಗ್ರಹಿಸಿದೆ.
ಎನ್‌ಎಸ್‌ಯುಥ ದ.ಕ.ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಮನೀಶ್ ರಾಜ್, ವಿಟಿಯು ಉಸ್ತುವಾರಿ ಅನ್ವೀತ್ ಕಟೀಲ್, ಮುಹಮ್ಮದ್ ಅಫೀಝ್, ಸಿರಾಜ್ ಗುಡುರು, ನಿಶಾಲ್ ಪೂಜಾರಿ, ಭರತ್, ವರುಣ್ ಕುಮಾರ್, ಅವಿಝ್, ನಿಝಾಮುದ್ದೀನ್, ಸಿದ್ದಾರ್ಥ್, ಅಬ್ದುಲ್ ರಾಝಿ ಮತ್ತಿತರರು ನಿಯೋಗದಲ್ಲಿದ್ದರು.







