ಸರಕಾರಿ ಜಮೀನಿನಲ್ಲಿನ ಅನಧಿಕೃತ ಮನೆ ಸಕ್ರಮಗೊಳಿಸಲು ಅವಕಾಶ: ಅರ್ಜಿ ಸ್ವೀಕರಿಸಲು ಅವಧಿ ವಿಸ್ತರಣೆ

ಬೆಂಗಳೂರು, ಜೂ. 8: ಗ್ರಾಮಾಂತರ ಮತ್ತು ನಗರ ಪ್ರದೇಶಗಳ ಸರಕಾರಿ ಜಮೀನುಗಳಲ್ಲಿ 2015ರ ಜನವರಿ 1ಕ್ಕಿಂತ ಮೊದಲು ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನ ಸಕ್ರಮಗೊಳಿಸಲು `ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 94-ಸಿ ಮತ್ತು 94-ಸಿಸಿ' ಅಡಿಯಲ್ಲಿ ಅವಕಾಶ ಕಲ್ಪಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಈ ಮೊದಲು ಅರ್ಜಿಗಳನ್ನ ಸ್ವೀಕರಿಸಲು 2019ರ ಮಾರ್ಚ್ 31ರ ವರೆಗೆ ಕಾಲಾವಕಾಶ ನಿಗದಿಪಡಿಸಲಾಗಿತ್ತು. ಸದ್ಯ 2022ರ ಮಾರ್ಚ್ 31ರವರೆಗೆ ಕಾಲಾವಕಾಶ ನೀಡಲಾಗಿದೆ. ಅರ್ಜಿಗಳನ್ನ ಸ್ವೀಕರಿಸಿ, ದಾಖಲೆಗಳ ಪರಿಶೀಲನೆ ನಡೆಸಿದ ನಂತರ ಫಲಾನುಭವಿಗಳಿಗೆ 2023ರ ಮಾರ್ಚ್ 31ರೊಳಗಾಗಿ ಹಕ್ಕುಪತ್ರಗಳನ್ನ ವಿತರಿಸಲಾಗುತ್ತದೆ ಎಂದು ಸಚಿವ ಅಶೋಕ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಪಲಾನುಭವಿಗಳು ಆರ್ಥಿಕವಾಗಿ ದುರ್ಬಲ ವರ್ಗದವರಾಗಿದ್ದು, ರಾಜ್ಯದಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಜಾಗಗಳಲ್ಲಿ ನೆಲೆಸಿದ್ದಾರೆ. ಈ ಮೂಲಕ ಅವರಿಗೆ ಸಕ್ರಮಗೊಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಅಶೋಕ್ ತಿಳಿಸಿದರು.
ಅನಧಿಕೃತ ಸಾಗುವಳಿ ಸಕ್ರಮಕ್ಕೆ ಅವಕಾಶ: ಸರಕಾರಿ ಜಮೀನಿನಲ್ಲಿ 2015ರ ಜನವರಿ 1ಕ್ಕಿಂತ ಮೊದಲು ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಭೂ ರಹಿತರು, ಸಣ್ಣ ರೈತರ ಜಮೀನುಗಳನ್ನು ಸಕ್ರಮೀಕರಣಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94-ಎ ಅಡಿಯಲ್ಲಿ ನಮೂನೆ 15ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಶೋಕ್ ಹೇಳಿದರು.
ಈ ಮೊದಲು 2018ರ ಮಾರ್ಚ್ 17ರಿಂದ ಒಂದು ವರ್ಷದ ಅವಧಿಗೆ ಅಂದರೆ 2019ರ ಮಾಚ್ 16ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ರಾಜ್ಯದಾದ್ಯಂತ 8,57,640 ಅರ್ಜಿಗಳು ಸ್ವೀಕೃತವಾಗಿದ್ದವು. ಅದರಲ್ಲಿ 3,74,087 ಅರ್ಜಿಗಳನ್ನ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಲಾಗಿದ್ದು, ಆ ವೇಳೆ ಲೋಕಸಭಾ ಚುನಾವಣೆ ಘೋಷಣೆಯಾದ ಪ್ರಯುಕ್ತ 4,83,553 ಅರ್ಜಿಗಳನ್ನ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸದರಿ ಅರ್ಜಿಗಳನ್ನ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಲು 2021ರ ಜುಲೈ 31ರ ವರೆಗೆ ಕಾಲಾವಕಾಶವನ್ನ ನೀಡಲಾಗಿದ್ದು, ಅರ್ಹ ರೈತರು ಜಮೀನು ಸಕ್ರಮಗೊಳಿಸಿಕೊಳ್ಳಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದರು.







