ಉದ್ಧವ್ ಠಾಕ್ರೆಯಿಂದ ಮೋದಿ ಭೇಟಿ: ಮೀಸಲಾತಿಗೆ ಶೇ. 50ರ ಮಿತಿ ರದ್ದತಿಗೆ ಆಗ್ರಹ

ಮುಂಬೈ,ಜೂ.8: ಮರಾಠಾ ಸಮುದಾಯ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯ ದೊರೆಯುವಂತಾಗಲು ಮೀಸಲಾತಿಗೆ ನಿಗದಿಪಡಿಸಿರುವ ಶೇ.50ರ ಮಿತಿಯನ್ನು ರದ್ದುಪಡಿಸಬೇಕೆಂದು ಕೋರಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಮಂಗಳವಾರ ಕೋರಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ನಿಯೋಗವು ಇಂದು ಹೊಸದಿಲ್ಲಿಯಲ್ಲಿ ಪ್ರಧಾನಿಯವರನ್ನು ಭೇಟಿಯಾಗಿ ಈ ವಿಷಯವಾಗಿ ಚರ್ಚಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ಪ್ರಧಾನಿ ಹಾಗೂ ಉದ್ಧವ್ ಠಾಕ್ರೆ ಸುಮಾರು 90 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಆನಂತರ ಉದ್ಧವ್ ಅವರು ಸುದ್ದಿಗಷ್ಠಿಯಲ್ಲಿ ಮಾತನಾಡಿ ಮರಾಠ ಮೀಸಲಾತಿಗೆ ಸಂಬಂಧಿಸಿ ತಾವು ಪ್ರಧಾನಿಯವರಿಗೆ ಎಲ್ಲಾ ವಾಸ್ತವ ಸಂಗತಿಗಳನ್ನು ವಿವರಿಸಿದೆವು ಹಾಗೂ ಆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಮಾಹಿತಿ ನೀಡಿದೆವು. ಪ್ರಧಾನಿಯವರು ನಮ್ಮ ಮಾತುಗಳನ್ನು ಗಮನವಿಟ್ಟು ಆಲಿಸಿದು ಹಾಗೂ ಶೀಘ್ರವೇ ಈ ವಿಷಯವಾಗಿ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಆಶಾವಾದಿಗಳಾಗಿದ್ದೇವೆ ಎಂದು ಉದ್ಧವ್ ಠಾಕ್ರೆ ತಿಳಿಸಿದರು.
ಮೇ 5ರಂದು ಸುಪ್ರೀಂಕೋರ್ಟ್ ಮರಾಠರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಪ್ರತ್ಯೇಕ ಮೀಸಲಾತಿಯನ್ನು ನೀಡುವುದು ಅಸಾಂವಿಧಾನಿಕವೆಂದು ಬಣ್ಣಿಸಿ ಅದನ್ನು ರದ್ದುಪಡಿಸಿತ್ತು.
ಉದ್ಧವ್ ಠಾಕ್ರೆ ಜೊತೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಲೋಕೋಪಯೋಗಿ ಸಚಿವ ಅಶೋಕ್ ಚವಾಣ್ ಕೂಡಾ ಆಗಮಿಸಿದ್ದರು.





