ವಿದೇಶಕ್ಕೆ ತೆರಳುವವರಿಗೆ ಲಸಿಕೆ: ದೃಢೀಕರಣ ಅಧಿಕಾರಿ ಬದಲಾವಣೆ
ಉಡುಪಿ, ಜೂ.8: ಜಿಲ್ಲೆಯಲ್ಲಿ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುವ ವಿದ್ಯಾರ್ಥಿ ಗಳು ಮತ್ತು ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವವರಿಗೆ ಅಪರ ಜಿಲ್ಲಾಧಿಕಾರಿ ಅವರನ್ನು ಅನೆಕ್ಚರ್-3ನ್ನು ದೃಢೀಕರಿಸುವ ಅಧಿಕಾರಿಯಾಗಿ ನೇಮಿಸಲಾಗಿತ್ತು.
ಆದರೆ, ಪ್ರಸ್ತುತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳು ಮತ್ತು ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವುದಾಗಿ ತಿಳಿಸಿ ಜಿಲ್ಲಾಧಿಕಾರಿ ಗಳ ಕಚೇರಿಗೆ ಲಸಿಕಾಕರಣಕ್ಕಾಗಿ ಅರ್ಜಿ ಸಲ್ಲಿಸುತ್ತಿರುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಹಾಗೂ ಅಪರ ಜಿಲ್ಲಾಧಿಕಾರಿಗಳಿಗೆ ಕೋವಿಡ್ ಕರ್ತವ್ಯಗಳ ಜವಾಬ್ದಾರಿಗಳೂ ಇರುವುದರಿಂದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಬದಲಿಗೆ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕ ರವೀಂದ್ರ ಅವರನ್ನು ಅನೆಕ್ಚರ್-3ನ್ನು ದೃಢೀಕರಿಸುವ ಅಧಿಕಾರಿಯಾಗಿ ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.
ನಿಯೋಜಿತ ಅಧಿಕಾರಿಗೆ ಸಹಾಯಕ್ಕಾಗಿ ಮೂರು ತಂಡಗಳನ್ನು ನೇಮಕ ಮಾಡಿದ್ದು, ಈ ಸಿಬ್ಬಂದಿಗಳಿಂದ ಅರ್ಜಿಗಳ ನೈಜತೆ ಬಗ್ಗೆ ದಾಖಲೆ ಗಳನ್ನು ಪರಿಶೀಲಿಸಿಕೊಂಡು ಅನೆಕ್ಚರ್-3ನ್ನು ದೃಢೀಕರಿಸಿ ನೀಡಬೇಕಾಗಿದೆ. ಈ ಕೆಲಸದಲ್ಲಿ ಯಾವುದೇ ತರಹದ ಲೋಪಕ್ಕೆ ಅವಕಾಶವಿಲ್ಲದಂತೆ ಕರ್ತವ್ಯ ನಿರ್ವಹಿಸುವಂತೆ, ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಅಧಿನಿಯಮ 2005 ರಡಿ ಹಾಗೂ ಎಪಿಡೆಮಿಕ್ ಡಿಸೀಸ್ ರೆಗ್ಯುಲೇಷನ್ ಆ್ಯಕ್ಟ್‌ನಂತೆ ನಿದ್ಯಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.







