ಲಿವ್ ಇನ್ ರಿಲೇಷನ್ ನಲ್ಲಿ ಇರುವ ಜೋಡಿಗಳ ನಿರ್ಧಾರವನ್ನು ನ್ಯಾಯಾಲಯ ವಿಮರ್ಶಿಸುವಂತಿಲ್ಲ:ಹೈಕೋರ್ಟ್ ಆದೇಶ

ಚಂಡೀಗಢ, ಜೂ: ವಿವಾಹದ ಮಾನ್ಯತೆಯಿಲ್ಲದೆಯೂ ಇಬ್ಬರು ಒಟ್ಟಾಗಿ ಬಾಳಬಹುದೇ ಎಂದು ನ್ಯಾಯಾಲಯ ವಿಮರ್ಶಿಸಲಾಗದು ಎಂದು ಹೇಳಿರುವ ಪಂಜಾಬ್ ಮತ್ತು ಹರ್ಯಾನ ಹೈಕೋರ್ಟ್, ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಜೋಡಿಗೆ ಜತೆಗೂಡಿ ಬದುಕುವ ಹಕ್ಕಿದೆ ಎಂದು ತೀರ್ಪು ನೀಡಿದೆ.
ಪಂಜಾಬ್‌ನ ಭಟಿಂಡಾದ 17 ವರ್ಷದ ಯುವತಿ ಹಾಗೂ 20 ವರ್ಷದ ಯುವಕನಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಯುವತಿ ಹಾಗೂ ಆ ಯುವಕ ಪ್ರೇಮಿಸುತ್ತಿದ್ದರು. ಈ ವಿಷಯ ತಿಳಿದಾಗ ಯುವತಿ ಮನೆಯವರು ಬೇರೊಬ್ಬ ಹುಡುಗನ ಜತೆ ಆಕೆಯ ಮದುವೆಗೆ ನಿರ್ಧರಿಸಿದ್ದರು. ಆಗ ಮನೆ ಬಿಟ್ಟ ಯುವತಿ ತನ್ನ ಪ್ರೇಮಿಯ ಮನೆಗೆ ತೆರಳಿದ್ದು ಇಬ್ಬರೂ ವಿವಾಹಕ್ಕೆ ಯೋಗ್ಯ ವಯಸ್ಕರಾಗುವವರೆಗೆ ಜತೆಯಲ್ಲೇ ಇರಲು ಅವರು ನಿರ್ಧರಿಸಿದ್ದಾರೆ. ಆದರೆ ಇದಕ್ಕೆ ಯುವತಿ ಮನೆಯವರ ವಿರೋಧ ಇದ್ದ ಕಾರಣ ಭಟಿಂಡಾದ ಪೊಲೀಸ್ ಅಧೀಕ್ಷಕರನ್ನು ಭೇಟಿಯಾಗಿ ರಕ್ಷಣೆ ಒದಗಿಸಲು ಕೋರಿದಾಗ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯಕ್ಕೆ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು ಎಂದು ವರದಿಯಾಗಿದೆ. ರಕ್ಷಣೆ ಕೋರಿದ್ದ ಜೋಡಿ ಮದುವೆಯಾಗಿಲ್ಲ ಮತ್ತು ಅವರು ಲಿವ್ಇನ್ ರಿಲೇಷನ್ನಲ್ಲಿದ್ದರು. ಲಿವ್ಇನ್ ರಿಲೇಷನ್ಗೆ ಸಂಬಂಧಿಸಿದ ಇತರ ಪ್ರಕರಣಗಳಲ್ಲೂ ರಕ್ಷಣೆ ನಿರಾಕರಿಸಿದ ಉದಾಹರಣೆಗಳಿವೆ ಎಂದು ಅರ್ಜಿಯ ವಿಚಾರಣೆ ಸಂದರ್ಭ ಪಂಜಾಬ್‌ನ ಅಸಿಸ್ಟೆಂಟ್ ಅಡ್ವೋಕೇಟ್ ಜನರಲ್ ವಾದಿಸಿದರು.
ಆದರೆ ಈ ವಾದವನ್ನು ತಳ್ಳಿಹಾಕಿದ ಹೈಕೋರ್ಟ್ ಜೋಡಿಗೆ ರಕ್ಷಣೆ ಒದಗಿಸುವಂತೆ ಸೂಚಿಸಿದೆ.