ನಕಲಿ ಜಾತಿ ಸರ್ಟಿಫಿಕೇಟ್ : ಮಹಾರಾಷ್ಟ್ರದ ಸಂಸದೆಗೆ 2 ಲಕ್ಷ ರೂ. ದಂಡ

ಮುಂಬೈ : ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಕ್ಕಾಗಿ ಮಹಾರಾಷ್ಟ್ರದ ಪಕ್ಷೇತರ ಸಂಸದೆ ನವನೀತ್ ಕೌರ್ ರಾಣಾಗೆ ಬಾಂಬೆ ಹೈಕೋರ್ಟ್ 2 ಲಕ್ಷ ರೂ. ದಂಡ ವಿಧಿಸಿದೆ. ಕೌರ್ ತಮ್ಮ ಸಂಸದ್ ಸದಸ್ಯ ಹುದ್ದೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. 7 ಭಾಷೆ ಮಾತನಾಡಬಲ್ಲ 35 ವರ್ಷದ ಕೌರ್ ನಟಿಯಾಗಿಯೂ ಖ್ಯಾತರಾಗಿದ್ದರು.
ಅಮರಾವತಿ ಸಂಸದೀಯ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಸಂಸತ್ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಇವರ ಆಯ್ಕೆಯನ್ನು ಪ್ರಶ್ನಿಸಿ ಶಿವಸೇನೆಯ ಮುಖಂಡ, ಮಾಜಿ ಸಂಸದ ಆನಂದರಾವ್ ಅದ್ಸೂಲ್ ಅರ್ಜಿ ಸಲ್ಲಿಸಿದ್ದರು. ಸಂಸತ್ನಲ್ಲಿ ಮಹಾರಾಷ್ಟ್ರ ಸರಕಾರದ ವಿರುದ್ಧ ಮಾತನಾಡಿದ್ದಕ್ಕೆ ತನ್ನನ್ನು ಜೈಲಿಗೆ ಕಳಿಸುವುದಾಗಿ ಲೋಕಸಭೆಯ ಮೊಗಸಾಲೆಯಲ್ಲಿ ಶಿವಸೇನೆಯ ಮುಖಂಡ ಅರವಿಂದ್ ಸಾವಂತ್ ಬೆದರಿಸಿದ್ದಾರೆ ಎಂದು ಮಾರ್ಚ್ನಲ್ಲಿ ಕೌರ್ ಆರೋಪಿಸಿದ್ದರು. ಅಲ್ಲದೆ ತನ್ನ ಮೇಲೆ ಆ್ಯಸಿಡ್ ಎರಚುವುದಾಗಿ ಶಿವಸೇನೆಯ ಲೆಟರ್ ಹೆಡ್ ಇರುವ ಪತ್ರದ ಮೂಲಕ ಮತ್ತು ಫೋನ್ ಕರೆಯ ಮೂಲಕ ಬೆದರಿಕೆ ಬಂದಿದೆ ಎಂದು ಲೋಕಸಭೆಯ ಸ್ಪೀಕರ್ಗೆ ದೂರು ನೀಡಿದ್ದರು.
ಮುಂಬೈ ಪೊಲೀಸ್ ಮಾಜಿ ಆಯುಕ್ತ ಪರಮ್ ಬೀರ್ ಸಿಂಗ್ ಅವರ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಬೇಕೆಂದು ಲೋಕಸಭೆಯ ಕಲಾಪದ ಸಂದರ್ಭ ಕೌರ್ ಆಗ್ರಹಿಸಿದ್ದರು.