ಉದ್ಯೋಗ ಖಾತ್ರಿಗೂ ಕೊರೋನ ಕರಿನೆರಳು: ಅಂಕಿ ಅಂಶ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಮೇಲೂ ಕೊರೋನ ಎರಡನೇ ಅಲೆಯ ಕರಿನೆರಳು ಬೀರಿದೆ.
ಮೇ ತಿಂಗಳಲ್ಲಿ ದೇಶಾದ್ಯಂತ ಒಟ್ಟು 30 ಕೋಟಿ ಮಾನವ ದಿನಗಳಷ್ಟು ಉದ್ಯೋಗ ಸೃಷ್ಟಿಯಾಗಿದ್ದು, ಇದು ಹಿಂದಿನ ವರ್ಷ ಇದೇ ತಿಂಗಳು ಸೃಷ್ಟಿಯಾದ ಉದ್ಯೋಗದ ಅರ್ಧದಷ್ಟು ಎನ್ನುವುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ.
ಎರಡನೇ ಅಲೆಯ ನಿಯಂತ್ರಣದ ನಿಟ್ಟಿನಲ್ಲಿ ವಿಧಿಸಿದ್ದ ನಿರ್ಬಂಧಗಳನ್ನು ಸಡಿಲಿಸುವ ಪ್ರಕ್ರಿಯೆ ದೇಶಾದ್ಯಂತ ಮುಂದುವರಿದಿದ್ದು, ಸಂಪೂರ್ಣ ಸಾಮರ್ಥ್ಯದಲ್ಲಿ ಕಾಮಗಾರಿ ಆರಂಭವಾದಾಗ ಉದ್ಯೋಗ ಯೋಜನೆ ಕೂಡಾ ವೇಗ ಪಡೆಯುವ ಸಾಧ್ಯತೆ ಇದೆ. ಮೇ ತಿಂಗಳಲ್ಲಿ ನರೇಗಾ ಯೋಜನೆಯಡಿ 29.7 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿದ್ದು, 2020ರ ಮೇ ತಿಂಗಳಲ್ಲಿ 56.9 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿತ್ತು.
ಎರಡನೇ ಅಲೆಯ ಕರಿನೆರಳು ಗ್ರಾಮೀಣ ಪ್ರದೇಶದ ಮೇಲೂ ಬಿದ್ದಿರುವುದನ್ನು ಇದು ದೃಢಪಡಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಮೊದಲ ಅಲೆಯ ಕರಿನೆರಳು ಬಹುತೇಕ ಪಟ್ಟಣ ಹಾಗೂ ನಗರ ಪ್ರದೇಶಕ್ಕೆ ಸೀಮಿತವಾಗಿತ್ತು. ಗ್ರಾಮೀಣ ಜನತೆಗೆ ದೊಡ್ಡ ಪ್ರಮಾಣದಲ್ಲಿ ಸೋಂಕು ತಗುಲಿದ್ದರಿಂದ ಹಾಗೂ ಸ್ಥಳೀಯವಾಗಿ ಲಾಕ್ ಡೌನ್ ಹೇರಿದ್ದರಿಂದ ಕಾರ್ಮಿಕರು ಮನೆಗಳಲ್ಲೇ ಉಳಿಯಬೇಕಾಯಿತು ಹಾಗೂ ನರೇಗಾ ಉದ್ಯೋಗ ಸ್ಥಳಗಳು ಖಾಲಿ ಉಳಿದವು.
ಕಳೆದ ವರ್ಷದ ಏಪ್ರಿಲ್ಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್ನಲ್ಲಿ ಅಧಿಕ ಉದ್ಯೋಗ ಸೃಷ್ಟಿಯಾಗಿತ್ತು. ಏಪ್ರಿಲ್ನಲ್ಲಿ 34.1 ಕೋಟಿ ಉದ್ಯೋಗ ಸೃಷ್ಟಿಯಾಗಿದ್ದು, ಇದು ಕಳೆದ ವರ್ಷದ ಏಪ್ರಿಲ್ನ ಪ್ರಮಾಣಕ್ಕಿಂತ 14.2 ಕೋಟಿಯಷ್ಟು ಅಧಿಕ. ಮಾರ್ಚ್ನಲ್ಲಿ 25.6 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿದ್ದು, ಫೆಬ್ರುವರಿಯಲ್ಲಿ 30.8 ಕೋಟಿ ಉದ್ಯೋಗ ಸೃಷ್ಟಿಯಾಗಿತ್ತು. ಏಪ್ರಿಲ್ನಲ್ಲಿ ಇದು ಮತ್ತೆ 34.1 ಕೋಟಿಗೆ ಹೆಚ್ಚಿತ್ತು ಎಂದು ಅಂಕಿ ಅಂಶ ವಿವರಿಸಿದೆ.