ಕೊರೋನ ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮವುಂಟುಮಾಡುವ ಕುರಿತು ಏಮ್ಸ್ ನಿರ್ದೇಶಕರು ಹೇಳಿದ್ದೇನು?
ಹೊಸದಿಲ್ಲಿ: ಕೋವಿಡ್ 19 ರ ಮುಂದಿನ ಅಲೆಯು ಮಕ್ಕಳಲ್ಲಿ ಗಂಭೀರ ಸೋಂಕನ್ನು ಉಂಟು ಮಾಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.
"ಭವಿಷ್ಯದಲ್ಲಿ ನಮ್ಮ ಮಕ್ಕಳು ಗಂಭೀರ ಸೋಂಕನ್ನು ಅನುಭವಿಸುತ್ತವೆ ಎಂದು ನಾನು ಭಾವಿಸುವುದಿಲ್ಲ. ಮೊದಲ ಎರಡು ಕೊರೋನ ಅಲೆಗಳಿಂದ ಸಂಗ್ರಹಿಸಿದ ದತ್ತಾಂಶವು ಹೊಸ ಅಥವಾ ಹಳೆಯ ರೂಪಾಂತರ ಪ್ರಭೇದಗಳು ಮಕ್ಕಳಲ್ಲಿ ತೀವ್ರ ಸೋಂಕನ್ನು ಉಂಟು ಮಾಡಲಿಲ್ಲ'' ಎಂದು ಡಾ.ಗುಲೇರಿಯಾ ಹೇಳಿದರು.
" ಕೋವಿಡ್-19 ಮುಂದಿನ ಅಲೆಯಲ್ಲಿ ಮಕ್ಕಳು ಗಂಭೀರವಾಗಿ ಸೋಂಕಿಗೆ ತುತ್ತಾಗ ಲಿದ್ದಾರೆ ಎಂಬುದನ್ನು ದೃಢಪಡಿಸುವ ಯಾವುದೇ ದತ್ತಾಂಶಗಳು ಅಂತರ್ ರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಲಭ್ಯವಿಲ್ಲ. ದೇಶದಲ್ಲಿ ಎರಡನೇ ಅಲೆಯಲ್ಲಿ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ಶೇ.60ರಿಂದ 70ರಷ್ಟು ಮಕ್ಕಳು ಅಸ್ವಸ್ಥತೆ, ಕಡಿಮೆ ರೋಗನಿರೋಧಕ ಶಕ್ತಿ ಹಾಗೂ ಆರೋಗ್ಯವಂತ ಮಕ್ಕಳು ಸೌಮ್ಯ ರೋಗ ಲಕ್ಷಣದೊಂದಿಗೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ’’ ಎಂದು ಗುಲೇರಿಯಾ ತಿಳಿಸಿದ್ದಾರೆ.
"ಪ್ರಪಂಚದ ಅನೇಕ ಭಾಗಗಳಲ್ಲಿ ಕೊರೋನದ ಹೊಸ ಅಲೆಗಳು ಕಾಣಿಸಿಕೊಂಡಿವೆ, ಆದರೆ ಕೊರೋನ ಮಕ್ಕಳನ್ನು ತೀವ್ರವಾಗಿ ಬಾಧಿಸುತ್ತಿದೆ ಎಂದು ಬಿಂಬಿಸಲು ಯಾವುದೇ ದತ್ತಾಂಶ ಇಲ್ಲ" ಎಂದು ಅವರು ಹೇಳಿದರು.
ಕೈ ಸ್ವಚ್ಛಗೊಳಿಸುವುದು, ಮಾಸ್ಕ್ ಗಳನ್ನು ಧರಿಸುವುದು ಹಾಗೂ ಜನಸಂದಣಿಯಲ್ಲಿರುವುದನ್ನು ತಪ್ಪಿಸುವುದು ಸೇರಿದಂತೆ ಕೋವಿಡ್-19ಗೆ ಸೂಕ್ತವಾದ ನಡವಳಿಕೆಯನ್ನು ಅನುಸರಿಸುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.
ಮಕ್ಕಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಯಾವುದೇ ಉಲ್ಬಣವನ್ನು ನಿಭಾಯಿಸಲು ಮಕ್ಕಳ ಆರೋಗ್ಯ ಮೂಲಸೌಕರ್ಯಗಳ ಸಿದ್ಧತೆಗಾಗಿ ಕೇಂದ್ರವನ್ನು ಒತ್ತಾಯಿಸುವೆ ಎಂದರು.