ʼಏಕತಾ ಪ್ರತಿಮೆʼ ಬಳಿ ಪಾರ್ಕಿಂಗ್ ಸ್ಥಳ ನಿರ್ಮಾಣದ ವಿರುದ್ಧ ಪ್ರತಿಭಟಿಸಿದ 11 ಮಂದಿ ಆದಿವಾಸಿಗಳ ಬಂಧನ

ಅಹ್ಮದಾಬಾದ್: ಗುಜರಾತ್ ನ ಕೆವಾಡಿಯಾ ಗ್ರಾಮದಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ರವರ ಏಕತಾ ಪ್ರತಿಮೆಯ ಬಳಿ ಪಾರ್ಕಿಂಗ್ ಸ್ಥಳವನ್ನು ನಿರ್ಮಿಸುವ ಸಲುವಾಗಿ ಸರ್ವೇ ನಡೆಯುತ್ತಿದ್ದು, ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ೧೧ ಮಂದಿ ಆದಿವಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆಂದು PTI ವರದಿ ಮಾಡಿದೆ.
ಸರ್ದಾರ್ ದರೋವರ್ ನರ್ಮದಾ ನಿಗಮವು ಅಭಿವೃದ್ಧಿ ಕಾರ್ಯಗಳಿಗಾಗಿ ಪಡೆದುಕೊಂಡಿರುವ ಭೂಮಿಯು ತಮ್ಮದೆಂದೂ, ನಮ್ಮಿಂದ ಈ ಭೂಮಿಯನ್ನು ಅನ್ಯಾಯವಾಗಿ ಪಡೆದುಕೊಳ್ಳಲಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಭೂಮಿ ಸರ್ವೇ ನಡೆಸುತ್ತಿದ್ದ ಸಂದರ್ಭದಲ್ಲಿ 24 ಮಂದಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. 20 ಮಂದಿ ಆದಿವಾಸಿಗಳು ಈ ವೇಳೆ ಪ್ರತಿಭಟನೆ ನಡೆಸಿದ್ದಾರೆ. ಅವರೆಲ್ಲರ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆ 143 (ಕಾನೂನು ಬಾಹಿರ ಸಭೆ), ಸಾಂಕ್ರಾಮಿಕ ರೋಗ ಹರಡುವಿಕೆ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮುಂತಾದ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾಗಿ ವರದಿ ತಿಳಿಸಿದೆ.
2019 ರಲ್ಲಿ ಗುಜರಾತ್ ಹೈಕೋರ್ಟ್ ಪ್ರತಿಮೆಯ ಬಳಿ ಪ್ರವಾಸೋದ್ಯಮ ಯೋಜನೆಗಳಿಗಾಗಿ ಭೂಸ್ವಾಧೀನವನ್ನು ಸ್ಥಗಿತಗೊಳಿಸಿತ್ತು. 182 ಮೀಟರ್ ಪ್ರತಿಮೆಯ ಬಳಿಯಿರುವ ಆರು ಗ್ರಾಮಗಳಲ್ಲಿನ ಆದಿವಾಸಿಗಳನ್ನು ಹೊರಹಾಕದಂತೆ ಅದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.