ಮಹಾರಾಷ್ಟ್ರದಲ್ಲಿ ಮುಂಗಾರು ಮಳೆ, ಮುಂಬೈ ರಸ್ತೆ,ರೈಲು ಹಳಿಗಳಲ್ಲಿ ಉಕ್ಕಿಹರಿದ ನೀರು

ಸಾಂದರ್ಭಿಕ ಚಿತ್ರ
ಮುಂಬೈ, ಜೂ.9: ನಿಗದಿತ ದಿನಕ್ಕಿಂತ ಒಂದು ದಿನ ಮುಂಚಿತವಾಗಿ ನೈಋತ್ಯ ಮುಂಗಾರು ಬುಧವಾರ ಮುಂಬೈ ಪ್ರವೇಶಿಸಿದ್ದು ಧಾರಾಕಾರ ಮಳೆಯಿಂದ ನಗರದ ಹಲವು ರಸ್ತೆಗಳು ನೆರೆನೀರಿನಲ್ಲಿ ಮುಳುಗಿದೆ. ರೈಲು ಹಾಗೂ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ವರದಿಯಾಗಿದೆ.
ನೈಋತ್ಯ ಮುಂಗಾರು ಮಾರುತ ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಚಲಿಸುತ್ತಿದೆ. ಕೇರಳಕ್ಕೆ ಜೂನ್ 3ರಂದು ಆಗಮಿಸಿದ್ದರಿಂದ ಮುಂಬೈಗೆ ಜೂನ್ 10ರಂದು ಆಗಮಿಸುವ ನಿರೀಕ್ಷೆಯಿತ್ತು ಎಂದು ಹವಾಮಾನ ಇಲಾಖೆಯ ಮುಂಬೈ ಕಚೇರಿ ಮುಖ್ಯಸ್ಥ ಡಾ. ಜಯಂತ ಸರ್ಕಾರ್ ಹೇಳಿದ್ದಾರೆ. ಬುಧವಾರ ಬೆಳಗ್ಗೆ 8:30ರವರೆಗಿನ 24 ಗಂಟೆಯ ಅವಧಿಯಲ್ಲಿ ಮುಂಬೈಯ ಕೊಲಾಬಾದಲ್ಲಿ 77 ಮಿಮೀ ಮಳೆಯಾಗಿದ್ದರೆ ಸಾಂತಕ್ರೂಸ್ನಲ್ಲಿ ಸುಮಾರು 60 ಮಿಮೀ, ಮುಂಬೈ ನಗರದಲ್ಲಿ 48.49 ಮಿಮೀ, ಪೂರ್ವದ ಉಪನಗರ ಪ್ರದೇಶದಲ್ಲಿ 66.99 ಮಿಮೀ, ಪಶ್ಚಿಮದ ಉಪನಗರ ಪ್ರದೇಶದಲ್ಲಿ 48.99 ಮಿಮೀ , ಬೇಲಾಪುರದಲ್ಲಿ 168 ಮಿಮೀ, ಚೆಂಬೂರು 125 ಮಿಮೀ, ಮುಂಬೈ ಸೆಂಟ್ರಲ್ನಲ್ಲಿ 112 ಮಿಮೀ, ವೊರ್ಲಿ ಮತ್ತು ಮಲ್ವಾನಿಯಲ್ಲಿ ತಲಾ 105 ಮಿಮೀ, ಕಾಂಡಿವಲಿ, ಬೊರಿವಲಿ, ಮುಂಬ್ರಾ, ಪೊವಾಯ್ ಮತ್ತು ಜುಹುವಿನಲ್ಲಿ 71ರಿಂದ 94 ಮಿಮೀ ಮಳೆಯಾಗಿದೆ ಎಂದು ಬೃಹನ್ಮುಂಬಯಿ ನಗರಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.
ಧಾರಾಕಾರ ಮಳೆಯಿಂದ ಕೆಲವೇ ಗಂಟೆಗಳಲ್ಲಿ ಕಿಂಗ್ ಸರ್ಕಲ್ನ ಗಾಂಧಿ ಮಾರ್ಕೆಟ್ ಪ್ರದೇಶ, ವಿಲೆಪಾರ್ಲೆಯ ಸಿಯಾನ್ನಿಂದ ಮಿಲಾನ್ ಸುರಂಗಮಾರ್ಗ ಜಲಾವೃತಗೊಂಡು ಸಂಚಾರ ವ್ಯವಸ್ಥೆಗೆ ತೊಡಕಾಗಿದೆ. ಭಾರೀ ಪ್ರಮಾಣದಲ್ಲಿ ನೀರು ತುಂಬಿದ್ದ ಕಾರಣ ಅಂಧೇರಿ ಸುರಂಗಮಾರ್ಗವನ್ನು ಬಂದ್ ಮಾಡಲಾಗಿದೆ. ಹಲವೆಡೆ ಮೊಣಕಾಲಿನ ವರೆಗಿನ ನೀರಿನಲ್ಲಿ ದ್ವಿಚಕ್ರ ವಾಹನ ಸವಾರರು ಸಾಗುತ್ತಿದ್ದ ದೃಶ್ಯ ಕಂಡುಬಂದಿದೆ ಎಂದು ಮೂಲಗಳು ಹೇಳಿವೆ.
ಸಿಯಾನ್ ಮತ್ತು ಕುರ್ಲಾದ ಮಧ್ಯೆ ಭಾರೀ ಮಳೆಯಿಂದ ಹಳಿಗಳು ನೀರಿನಲ್ಲಿ ಮುಳುಗಿದ ಹಿನ್ನೆಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್(ಸಿಎಸ್ಎಂಟಿ)ನಿಂದ ಕುರ್ಲಾದವರೆಗಿನ ಲೋಕಲ್ ರೈಲು ಸಂಚಾರ ರದ್ದಾಗಿದೆ. ಇದೇ ಕಾರಣದಿಂದ ಸಿಎಸ್ಎಂಟಿ-ಥಾಣೆ , ಸಿಎಸ್ಎಂಟಿ- ಥಾಣೆ ಲೋಕಲ್ ರೈಲು ಸಂಚಾರವೂ ರದ್ದಾಗಿದೆ. ಪಶ್ಚಿಮ ರೈಲ್ವೇಯ ಮಾರ್ಗದಲ್ಲಿ ಹಳಿಯಲ್ಲಿ ತುಂಬಿದ್ದ ನೀರನ್ನು ಪಂಪ್ ಬಳಸಿ ತೆರವುಗೊಳಿಸಿದ್ದು ರೈಲು ಸಂಚಾರಕ್ಕೆ ಧಕ್ಕೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ರಸ್ತೆಯಲ್ಲಿ ನೀರು ನಿಂತಿದ್ದ ಕಾರಣ ಕೆಲವು ಕಡೆ ಬೆಸ್ಟ್ ಬಸ್ಸುಗಳ(ಮುಂಬೈ ಸಾರಿಗೆ ) ಮಾರ್ಗವನ್ನು ಬದಲಾಯಿಸಲಾಗಿದೆ. ಕೊರೋನ ಸೋಂಕಿನ ದ್ವಿತೀಯ ಅಲೆಯ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಮಹಾರಾಷ್ಟ್ರಕ್ಕೆ ಈಗ ಮುಂಗಾರು ಮಳೆಯಿಂದ ಮತ್ತಷ್ಟು ಸಮಸ್ಯೆ ಎದುರಾಗುವ ಆತಂಕವಿದೆ. ಮುಂದಿನ 48 ಗಂಟೆ(ಬುಧವಾರ ಬೆಳಗ್ಗಿನಿಂದ)ಯಲ್ಲಿ ನೈಋತ್ಯ ಮುಂಗಾರು ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಬಂಗಾಳದತ್ತ ಸಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ರೆಡ್ ಅಲರ್ಟ್ ಜಾರಿ ಪರಿಸ್ಥಿತಿ ಅವಲೋಕಿಸಿದ ಠಾಕ್ರೆ
ಮುಂಬೈ ನಗರದಲ್ಲಿ ಬುಧವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆ ಸುರಿಯುತ್ತಿದ್ದು, ಶುಕ್ರವಾರದವರೆಗೆ ಭಾರೀ ಮಳೆ ಮುಂದುವರಿಯಲಿದೆ ಎಂದು ಹೇಳಿರುವ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಪರಿಸ್ಥಿತಿಯ ಅವಲೋಕನ ನಡೆಸಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ತಗ್ಗು ಪ್ರದೇಶದಲ್ಲಿ ಮತ್ತು ರಸ್ತೆ, ರೈಲು ಹಳಿಯಲ್ಲಿ ನಿಂತಿರುವ ನೀರನ್ನು ತ್ವರಿತವಾಗಿ ಬರಿದುಗೊಳಿಸಿ ಸಂಚಾರ ವ್ಯವಸ್ಥೆ ಸುಗಮಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಮುಂಬೈಯ ಕಂಟ್ರೋಲ್ ರೂಂ, ಥಾಣೆ, ರಾಯ್ಗಢ, ರತ್ನಗಿರಿ, ಸಿಂಧುದುರ್ಗ ಮತ್ತು ಪಾಲ್ಘರ್ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಪಡೆದ ಠಾಕ್ರೆ, ಮಳೆ ಮುಂದುವರಿಯುವ ಮುನ್ಸೂಚನೆ ಇರುವುದರಿಂದ ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು ಎಂದು ವರದಿಯಾಗಿದೆ.