ಸರಕಾರದ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು, ಪೋಷಕರಿಗೆ ಗೊಂದಲ: ಎನ್‌ಎಸ್‌ಯುಐ

ಮಂಗಳೂರು, ಜೂ. 9: ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿ, 10ನೆ ತರಗತಿಯ ಪರೀಕ್ಷೆ ನಡೆಸುವ ರಾಜ್ಯ ಸರಕಾರದ ನಿರ್ಧಾರವು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಗೊಂದಲ ಹಾಗೂ ಆತಂಕಕ್ಕೆ ತಳ್ಳಿದೆ ಎಂದು ಎನ್‌ಎಸ್‌ಯುಐನ ರಾಜ್ಯ ಪ್ರಧಾನ ಕಾರ್ಯದರ್ಶಿ ಮನೀಷ್ ಜಿ. ರಾಜ್ ಆಕ್ಷೇಪಿಸಿದ್ದಾರೆ.
ನಂತರ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿರುವ ಸರಾಕರ ವಿದ್ಯಾರ್ಥಿಗಳನ್ನು ಯಾವ ಆಧಾರದಲ್ಲಿ ಪ್ರಮೋಟ್ ಮಾಡಲಿದೆ ಎಂಬ ಬಗ್ಗೆ ಸ್ಪಷ್ಟತೆ ನೀಡಿಲ್ಲ. ಮಾತ್ರವಲ್ಲದೆ, ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳ ಬಗ್ಗೆಯೂ ಯಾವುದೇ ಸ್ಪಷ್ಟತೆ ಇಲ್ಲ ಎಂದರು.
ಈ ಎಲ್ಲಾ ಅಂಶಗಳ ಕುರಿತಂತೆ ಎನ್‌ಎಸ್‌ಯುಐ ರಾಜ್ಯ ಘಟಕದ ವತಿಯಿಂದ ರವಿವಾರ ಶಿಕ್ಷಣ ಸಚಿವರ ಮನೆಗೆ ಭೇಟಿ ನೀಡಿ ಮನವಿ ಸಲ್ಲಿಲಾಗುವುದು ಎಂದು ಹೇಳಿದ ಅವರು, ಪ್ರಸ್ತುತ ಆನ್‌ಲೈನ್ ಮೂಲಕ ತರಗತಿ ನಡೆಸುತ್ತಿರುವ ಖಾಸಗಿ ವಿದ್ಯಾ ಸಂಸ್ಥೆಗಳು ಶುಲ್ಕದಲ್ಲಿ ಕಡಿತ ಮಾಡಿಲ್ಲ ಎಂದು ಆಕ್ಷೇಪಿಸಿದರು.
ಖಾಸಗಿ ಕಾಲೇಜುಗಳಿಂದ ಶುಲ್ಕಕ್ಕಾಗಿ ಪೋಷಕರನ್ನು ಒತ್ತಾಯಿಸಲಾಗುತ್ತಿದೆ. ಈ ಬಗ್ಗೆ ಸರಕಾರ ಕ್ರಮ ವಹಿಸಬೇಕು. ಆನ್‌ಲೈನ್ ತರಗತಿಗಳು ನಡೆಯುತ್ತಿರುವುದರಿಂದ ಹಾಸ್ಟೆಲ್, ಲೈಬ್ರರಿ ಮೊದಲಾದ ಶುಲ್ಕವನ್ನು ಕಡಿತ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಮುಂದೆ ಕಾಲೇಜು ಆರಂಭವಾಗುವ ಮೊದಲು ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮ ನಡೆಸಬೇಕು ಎಂದು ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸವದ್ ಸುಳ್ಯ ಆಗ್ರಹಿಸಿದರು.
ಎಲ್ಲಾ ಪದವಿ ತರಗತಿಗಳನ್ನು ರದ್ದುಗೊಳಿಸಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಬೇಕೆಂದು ಆಗ್ರಹಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗೆ ಮನವಿಯನ್ನೂ ಸಲ್ಲಿಸಿರುವುದಾಗಿ ಸವದ್ ಸುಳ್ಯ ತಿಳಿಸಿದರು.
ಕೊರೋನದಿಂದಾಗಿ ಈಗಾಗಲೇ ಆನ್‌ಲೈನ್ ತರಗತಿಗಳಿಂದ ಕಂಗೆಟ್ಟಿರುವ ವಿದ್ಯಾರ್ಥಿಗಳು ಒಂದು ವರ್ಷದ ಎರಡೂ ಸೆಮಿಸ್ಟರ್ ಗಳನ್ನು ಏಕಕಾಲದಲ್ಲಿ ಬರೆಯಬೇಕಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಈಡಾಗಲಿದ್ದಾರೆ. ಈಗಾಗಲೇ ಪೋಷಕರು ಆರ್ಥಿಕವಾಗಿ ಕಂಗೆಟ್ಟಿದ್ದು, ಕಾಲೇಜು ಶುಲ್ಕ ಭರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೆಚ್ಚುವರಿ ಶುಲ್ಕಗಳನ್ನು ಪಡೆಯು ತ್ತಿರುವ ಖಾಸಗಿ ಕಾಲೇಜುಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಎನ್‌ಎಸ್‌ಯುಐ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮನವಿ ಮಾಡಿದೆ ಎಂದು ಅವರು ಹೇಳಿದರು.
ಈ ಸಂದರ್ಭ ಅನ್ವಿತ್ ಕಟೀಲು, ಮುಹಮ್ಮದ್ ಅಫೀಝ್, ನಿಶಾಲ್ ಪೂಜಾರಿ, ಶಫೀಕ್, ಅಬ್ದುಲ್ ರಾಝಿ ಮೊದಲಾದವರು ಉಪಸ್ಥಿತರಿದ್ದರು.









